ವಿಜಯಪುರ: ದೀರ್ಘಕಾಲದ ನಿರೀಕ್ಷೆಯ ಬಳಿಕ ಸಿದ್ಧಗೊಳ್ಳುತ್ತಿರುವ ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಎರಡು ಅಗ್ನಿಶಾಮಕ ವಾಹನಗಳು ಆಸ್ಟ್ರಿಯಾದಿಂದ ಬಂದಿಳಿದಿವೆ. ಈ ಮೂಲಕ ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಪೂರೈಸುವ ಅಗ್ನಿಶಾಮಕ ವಾಹನಗಳನ್ನು ಜಾಗತಿಕ ಟೆಂಡರ್ ಅಡಿಯಲ್ಲಿ ಖರೀದಿಸಲಾಗಿದೆ. ಇವು ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆ ಹೊಂದಿದ್ದು, ತುರ್ತು ಸಂದರ್ಭಗಳಲ್ಲಿ 160 ಮೀಟರ್‌ಗಳವರೆಗೂ ನೀರನ್ನು ಹಾಯಿಸಿ ಬೆಂಕಿ ನಂದಿಸುವ ಸಾಮರ್ಥ್ಯ ಹೊಂದಿವೆ.
ವಿಮಾನ ನಿಲ್ದಾಣ ಕಾರ್ಯಾರಂಭಕ್ಕೂ ಮುನ್ನ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಕಡ್ಡಾಯವಾಗಿ ನಿಗದಿಪಡಿಸಿರುವ ಭದ್ರತಾ ನಿಯಮಾವಳಿ ಅಡಿ ಅಗ್ನಿಶಾಮಕ ವಾಹನಗಳ ಲಭ್ಯತೆ ಪ್ರಮುಖ ಅಂಶವಾಗಿತ್ತು. ಈಗ ಈ ಅಗತ್ಯವನ್ನು ಪೂರೈಸಲಾಗಿದೆ.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, “ಅಗ್ನಿಶಾಮಕ ವಾಹನಗಳು ಬಂದಿರುವುದರಿಂದ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಹೆಜ್ಜೆ ಮುಂದಾಗಿದೆ. ಈಗ ಪರಿಸರ ಸಂಬಂಧಿ ಅನುಮತಿ ಬಾಕಿಯಿದ್ದು, ಅದನ್ನು ಶೀಘ್ರದಲ್ಲೇ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
ಈಗಾಗಲೇ ವಿಮಾನ ನಿಲ್ದಾಣದ ಮೂಲಸೌಕರ್ಯ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಭದ್ರತಾ ಪರಿಶೀಲನೆ ಹಾಗೂ ಪರಿಸರ ಅನುಮತಿ ದೊರೆತ ತಕ್ಷಣ ಉದ್ಘಾಟನೆ ನೆರವೇರಲಿದೆ. ವಿಮಾನ ನಿಲ್ದಾಣ ಆರಂಭವಾದರೆ, ಉತ್ತರ ಕರ್ನಾಟಕದ ಜನತೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ಮಹತ್ತರ ಮುನ್ನಡೆ ನೀಡಲಿದೆ.
