ಮುದ್ದೇಬಿಹಾಳ: ಕಾಲುವೆಯಲ್ಲಿ ಜಾರಿಬಿದ್ದು ಮುಳುಗುತ್ತಿದ್ದ ಅಕ್ಕನ ಜೀವ ಉಳಿಸಲು ಹೋದ ತಮ್ಮಂದಿರಿಬ್ಬರು ನೀರು ಪಾಲಾಗಿರುವ ಘಟನೆ ತಾಲೂಕಿನ ಶಿರೋಳ ಗ್ರಾಮದ ಸಮೀಪದ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ನಡೆದಿದೆ.
ಬಸಮ್ಮ ಕೊಣ್ಣೂರ (21), ಸಂತೋಷ ಕೊಣ್ಣೂರ (16) ಹಾಗೂ ರವಿ ಕೊಣ್ಣೂರ (15) ಕಾಲುವೆಯಲ್ಲಿ ಮುಳುಗಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಬಟ್ಟೆ ತೊಳೆಯಲು ಹೋಗಿದ್ದ ಬಸಮ್ಮ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಆಕೆಯ ಸಹೋದರ ಸಂತೋಷ ಕಾಲುವೆಗೆ ಜಿಗಿದಿದ್ದು, ನೀರಿನ ಪ್ರಮಾಣ ಅಧಿಕವಾಗಿದ್ದರಿಂದ ನೀರಿನ ಸೆಳೆತಕ್ಕೆ ಹರಿದು ಹೋಗಿದ್ದಾರೆ.
ಇದನ್ನು ಗಮನಿಸಿದ ಬಸಮ್ಮಳ ಸಂಬಂಧಿ ರವಿ ಇಬ್ಬರನ್ನು ರಕ್ಷಿಸಲು ಕಾಲುವೆ ಪಕ್ಕದಲ್ಲಿಯೇ ಬಿದ್ದಿದ್ದ ಹಳೆಯ ಸೀರೆಯೊಂದನ್ನು ಇವರ ಸಹಾಯಕ್ಕೆ ಎಸೆದಿದ್ದಾನೆ. ಈ ಸಮಯದಲ್ಲಿ ಕಾಲು ಜಾರಿ ಆತನೂ ಕಾಲುವೆಗೆ ಬಿದ್ದು ಮುಳುಗಿದ್ದಾನೆ. ಶೋಧ ಕಾರ್ಯಾಚರಣೆಯಲ್ಲಿ ಸಂತೋಷನ ಶವ ಸಿಕ್ಕಿದೆ.
