Home ನಮ್ಮ ಜಿಲ್ಲೆ ವಿಜಯನಗರ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

0

ಹೊಸಪೇಟೆ (ವಿಜಯನಗರ): ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಪವಿತ್ರ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಬುಧವಾರ ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಹಂಪಿಯ ವೈಭವವನ್ನು ಮೆಚ್ಚಿದ ಅವರು, ವಿರೂಪಾಕ್ಷನ ದರ್ಶನ ಪಡೆದ ನಂತರ ದೇವಸ್ಥಾನದ ಪುರೋಹಿತರಿಂದ ಆಶೀರ್ವಾದ ಪಡೆದರು.

ದರ್ಶನದ ವೇಳೆ ಹಂಪಿಯ ಪ್ರಸಿದ್ಧ ಆನೆ ಲಕ್ಷ್ಮಿ ಸೀತಾರಾಮನ್‌ ಅವರಿಗೆ ಶಿರೋನಮನ ನೀಡಿ ಆಶೀರ್ವಾದ ನೀಡಿದ ಕ್ಷಣ ಭಕ್ತರನ್ನು ಆಕರ್ಷಿಸಿತು. ದೇವಸ್ಥಾನ ಆವರಣದಲ್ಲಿ ಭಕ್ತರ ಸಂಭ್ರಮ ಹಾಗೂ “ಹರ ಹರ ಮಹಾದೇವ” ಘೋಷಗಳು ಮೊಳಗಿದವು.

ಈ ಸಂದರ್ಭದಲ್ಲಿ ಬಳ್ಳಾರಿ ಸಂಸದ ಇ. ತುಕಾರಾಂ, ಸಚಿವೆ ಅವರ ಆಪ್ತ ಕಾರ್ಯದರ್ಶಿ ಅನಿರುದ್ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹಾಗೂ ಆನೆಗುಂದಿ ಸಂಸ್ಥಾನದ ರಾಜವಂಶಸ್ಥ ಶ್ರೀಕೃಷ್ಣದೇವರಾಯ ಉಪಸ್ಥಿತರಿದ್ದರು.

ಹಂಪಿಯ ಪುರಾತನ ಸ್ಮಾರಕ ಪ್ರದೇಶದ ಸೌಂದರ್ಯವನ್ನು ಪ್ರಶಂಸಿಸಿದ ನಿರ್ಮಲಾ ಸೀತಾರಾಮನ್, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ಬೆಂಬಲದ ಕುರಿತೂ ಮಾತನಾಡಿದರು. ಅವರು ಸ್ಥಳೀಯ ಅಧಿಕಾರಿಗಳಿಂದ ಹಂಪಿಯ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ಪಡೆದು, ಪ್ರವಾಸೋದ್ಯಮದ ಮೂಲಸೌಕರ್ಯ ಬಲಪಡಿಸುವ ಕುರಿತ ಸಲಹೆ ನೀಡಿದರು.

ಇಲ್ಲಿಯ ಕಲೆ ಸಂಸ್ಕೃತಿ ಈ ನಾಡಿನ ಪರಂಪರೆಯ ಪ್ರತೀಕವಾಗಿದೆ. ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣ ಹಂಪಿಯ ಪ್ರತಿಯೊಂದು ಶಿಲೆಯು ಇಲ್ಲಿನ ಪರಂಪರೆಯನ್ನ ಪ್ರತಿಬಿಂಬಿಸುವಂತಿದೆ. ದೇವರ ದರ್ಶನದ ಬಳಿಕ ಸ್ಥಳೀಯ ಭಕ್ತರು ಮತ್ತು ಪ್ರವಾಸಿಗರೊಂದಿಗೆ ಸಂಭಾಷಣೆ ನಡೆಸಿದ ಸೀತಾರಾಮನ್, ಹಂಪಿಯ ಇತಿಹಾಸ, ಶಿಲ್ಪಕಲೆ ಮತ್ತು ದೇವಾಲಯದ ಶಾಂತಿಯುತ ವಾತಾವರಣವನ್ನು ಮೆಚ್ಚಿಕೊಂಡರು. “ಹಂಪಿ ನಮ್ಮ ದೇಶದ ಸಂಸ್ಕೃತಿ, ಶ್ರದ್ಧೆ ಮತ್ತು ಶಿಲ್ಪಕಲೆಯ ಜೀವಂತ ನಿದರ್ಶನ. ಇಂತಹ ಪವಿತ್ರ ಸ್ಥಳಕ್ಕೆ ಬಂದಿರುವುದು ನನಗೆ ಅದೃಷ್ಟ,” ಎಂದು ಅವರು ಹೇಳಿದರು.

ಅವರ ಭೇಟಿಯ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಠಿಣಗೊಳಿಸಲಾಗಿತ್ತು. ಅಧಿಕಾರಿಗಳು ಹಾಗೂ ದೇವಸ್ಥಾನ ಟ್ರಸ್ಟ್ ಸದಸ್ಯರು ಸೀತಾರಾಮನ್ ಅವರಿಗೆ ಹಂಪಿಯ ಪೈತೃಕ ಮಹತ್ವದ ಕುರಿತು ವಿವರಣೆ ನೀಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version