ದಸರಾ 2025. ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರು-ಹೊಸಪೇಟೆ ಮತ್ತು ಬೆಂಗಳೂರು-ಮಂಗಳೂರು ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಿದೆ.
ಬಳ್ಳಾರಿ ಸಂಸದ ಈ.ತುಕಾರಾಮ್ ದಸರಾ ಹಬ್ಬದ ಪ್ರಯುಕ್ತ ಬಳ್ಳಾರಿ-ವಿಜಯನಗರ ರೈಲು ಪ್ರಯಾಣಿಕರಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದ್ದಾರೆ. ವಿಜಯನಗರ ರೈಲ್ವೆ ಬಳಕೆದಾರರ ಸಮಿತಿಯು ಬಳ್ಳಾರಿ-ಹೊಸಪೇಟೆ-ಕೊಪ್ಪಳ ಭಾಗದ ಜನರು ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಬೆಂಗಳೂರು-ಮೈಸೂರುನಿಂದ ಬಳ್ಳಾರಿ-ಹೊಸಪೇಟೆಗೆ ತೆರಳಲು ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಸಂಸದರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಸಂಸದರು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದರು. ರೈಲ್ವೆ ಇಲಾಖೆಯು ಬಳ್ಳಾರಿ-ವಿಜಯನಗರ ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದೆ.
ರೈಲು ವೇಳಾಪಟ್ಟಿ: ಎಸ್ಎಂವಿಬಿ–ಹೊಸಪೇಟೆ ನಡುವೆ ರೈಲು ಸಂಖ್ಯೆ 06215/ 06216 2 ಟ್ರಿಪ್ ಸಂಚಾರ ನಡೆಸಲಿದೆ. ರೈಲು ಸೆಪ್ಟೆಂಬರ್ 26ರ (ಶುಕ್ರವಾರ) ಮತ್ತು 28ರ ಭಾನುವಾರ ಬೆಂಗಳೂರಿನಿಂದ ಹೊರಡಲಿದೆ.
ರೈಲು ಬೆಂಗಳೂರಿನ ಎಸ್ಎಂವಿಬಿಯಿಂದ ಸಂಜೆ 7ಗಂಟೆಗೆ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಹೊಸಪೇಟೆ ತಲುಪಲಿದೆ. ಹೊಸಪೇಟೆಯಿಂದ 27 (ಶನಿವಾರ) ಮತ್ತು 29 (ಸೋಮವಾರ) ರಾತ್ರಿ 8.45ಕ್ಕೆ ಹೊರಟು ಬೆಳಗ್ಗೆ 8.10ಕ್ಕೆ ಎಸ್‌ಎಂವಿಬಿ ತಲುಪಲಿದೆ.
ಬೆಂಗಳೂರು-ಮಂಗಳೂರು ರೈಲು: ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮಂಗಳೂರು ನಡುವೆ ಸಹ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ.
ರಾಜಧಾನಿ ಬೆಂಗಳೂರಿನಿಂದ ಕರಾವಳಿ ಕರ್ನಾಟಕದ ಮಂಗಳೂರು, ಉಡುಪಿ ಭಾಗಕ್ಕೆ ಪ್ರಯಾಣ ಮಾಡುವ ಜನರಿಗೆ ಈ ರೈಲು ಸಹಾಯಕವಾಗಲಿದೆ.
ಈ ರೈಲು ಯಶವಂತಪುರ-ಮಂಗಳೂರು ನಡುವೆ ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06257/ 06258 1 ಟ್ರಿಪ್ ಉಭಯ ನಗರಗಳ ನಡುವೆ ಓಡಲಿದೆ.
ಈ ರೈಲು ಸೆಪ್ಟೆಂಬರ್ 30ರ ಮಂಗಳವಾರ ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅಕ್ಟೋಬರ್ 1ರ ಬುಧವಾರ ಮಧ್ಯಾಹ್ನ 2.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ.