Home News ಎಸ್ಸೆಸ್ಸೆಲ್ಸೀಲಿ 33 ಅಂಕ ಪಡೆದರೆ ಪಾಸ್?

ಎಸ್ಸೆಸ್ಸೆಲ್ಸೀಲಿ 33 ಅಂಕ ಪಡೆದರೆ ಪಾಸ್?

ಬೆಂಗಳೂರು: ಇಷ್ಟು ದಿನ ಒಂದು ವಿಷಯ ಪಾಸಾಗಲು ೩೫ ಅಂಕಗಳನ್ನು ಪಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಉತ್ತೀರ್ಣ ಸಂಖ್ಯೆಯನ್ನು ಶೇ. ೩೩ಕ್ಕೆ ಇಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರವಾಗಿ ಕುಸಿದಿದ್ದರಿಂದ ಮುಜುಗರಕ್ಕೆ ಈಡಾದ ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಮಾದರಿಯಲ್ಲೇ ರಾಜ್ಯ ಪಠ್ಯ ಕ್ರಮದಲ್ಲಿ ಉತ್ತೀರ್ಣ ಸಂಖ್ಯೆಯನ್ನು ಶೇ.೩೩ಕ್ಕೆ ಇಳಿಸಲು ಶಿಕ್ಷಣ ಇಲಾಖೆ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದೆ.
ಪ್ರತಿಬಾರಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷಾ ಪರೀಕ್ಷೆಯನ್ನು ೧೨೫ ಅಂಕಗಳಿಗೆ ಕೊಡಲಾಗುತ್ತಿತ್ತು. ಈ ಸಲ ಪ್ರಥಮ ಭಾಷಾ ಪರೀಕ್ಷೆಯನ್ನು ೧೦೦ ಅಂಕಗಳಿಗೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊರಟಿದೆ. ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಯನ್ನು ೧೦೦ ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಇದರಲ್ಲಿ ೨೦ ಆಂತರಿಕ ಅಂಕಗಳು ಇರುತ್ತಿದ್ದವು. ಇದೇ ನಿಟ್ಟಿನಲ್ಲಿಯೇ ಪ್ರಥಮ ಭಾಷೆಯಲ್ಲಿಯೂ ಇನ್ನು ಮುಂದೆ ೧೦೦ ಅಂಕಗಳಿಗೆ ಪರೀಕ್ಷೆ ಕೊಡಲಾಗುತ್ತದೆ. ವಿದ್ಯಾರ್ಥಿಗಳು ಇನ್ನು ಮುಂದೆ ೬೨೫ ಅಂಕಗಳ ಬದಲಿಗೆ ೬೦೦ಕ್ಕೆ ಪರೀಕ್ಷೆ ಬರೆಯಲಿದ್ದಾರೆ. ಈ ಬದಲಾವಣೆಯಿಂದ ಪ್ರಥಮ ಭಾಷೆಯ ಆಂತರಿಕ ಅಂಕಗಳು ೨೫ರಿಂದ ೨೦ಕ್ಕೆ ಇಳಿಕೆ ಆಗುತ್ತದೆ. ಲಿಖಿತ ಪರೀಕ್ಷೆ ಮಾತ್ರ ಈ ಹಿಂದಿನಂತೆ ೮೦ ಅಂಕಗಳಿಗೆ ಬರೆಯಲಿದ್ದಾರೆ.ಫಲಿತಾಂಶ ಸುಧಾರಣೆಯ ಹೊಸ ತಂತ್ರದಲ್ಲಿ ವಿದ್ಯಾರ್ಥಿ ಒಬ್ಬ ಒಂದು ವಿಷಯದಲ್ಲಿ ೨೦ಕ್ಕೆ ೨೦ ಆಂತರಿಕ ಅಂಕಗಳನ್ನು ಪಡೆದು, ಲಿಖಿತ ಪರೀಕ್ಷೆಯಲ್ಲಿ ಕೇವಲ ೧೩ ಅಂಕ ಪಡೆದರೆ ಸಾಕು ಆ ಮಗು ಪಾಸಾಗಲಿದೆ.
ಪರೀಕ್ಷಾ ಸುಧಾರಣಾ ಸಮಿತಿಯೂ ಸಹ ಫಲಿತಾಂಶ ಸುಧಾರಣೆಗೆ ಕೈ ಜೋಡಿಸಿದೆ. ಪ್ರಶ್ನೆ ಪತ್ರಿಕೆಗಳಲ್ಲಿ ಒಂದು ಅಂಕದ, ಬಹು ಆಯ್ಕೆಯ ಪ್ರಶ್ನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು, ಪ್ರತಿ ವಿಭಾಗದಲ್ಲೂ ಹೆಚ್ಚು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಎರಡು, ಮೂರು, ನಾಲ್ಕು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಅವಕಾಶವನ್ನು ನೀಡಲು ಹೊರಟಿದೆ.
ಒಂದೆಡೆ ತೇರ್ಗಡೆ ಅಂಕವನ್ನು ಶೇ.೩೩ಕ್ಕೆ ಇಳಿಕೆ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಸಂತಸದ ಸಂಗತಿಯಾದರೇ ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ತೊಂದರೆ ಆಗಿದ್ದರಿಂದ ಅವರಿಗೆ ೧೦ ಕೃಪಾಂಕ ನೀಡಿ ಕಲಿಕಾ ನಷ್ಟ ತುಂಬಲಾಗುತ್ತಿತ್ತು. ಇದೀಗ ಶಿಕ್ಷಣ ಇಲಾಖೆ ಕೃಪಾಂಕ ನೀಡಿಕೆ ಪದ್ಧತಿಯನ್ನು ಸಂಪೂರ್ಣ ರದ್ದು ಪಡಿಸಲು ತೀರ್ಮಾನಿಸಿದೆ.

Exit mobile version