ಕೊಪ್ಪಳ: ಹಿಂದೂ ಧರ್ಮದಲ್ಲಿ ರಕ್ಷಾಬಂಧನಕ್ಕೆ ಅದರದ್ದೇ ಆದ ಮಹತ್ವವಿದೆ. ದೂರದ ಊರಿನಲ್ಲಿರುವ ಸಹೋದರ-ಸಹೋದರಿಯರು ಕೂಡ ಅಂದು ಒಂದುಗೂಡಿ ಹಬ್ಬವನ್ನು ಆಚರಿಸುತ್ತಾರೆ. ಆದರೆ ರಕ್ಷಾಬಂಧನದ ಐದು ದಿನಗಳ ಮುನ್ನವೇ ಅಗಲಿದ ಸಹೋದರನಿಗೆ ಸಹೋದರಿಯರು ಅಳುತ್ತಲೇ ಕೊನೆಯ ಬಾರಿಗೆ ಸ್ಮಶಾನದಲ್ಲಿಯೇ ರಾಖಿ ಕಟ್ಟಿದ ದೃಶ್ಯ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಕೊಪ್ಪಳದ ಗವಿಮಠ ಹಿಂಭಾಗದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೂ ಮುನ್ನ ಅಗಲಿದ ಸಹೋದರ ಗವಿಸಿದ್ದಪ್ಪ ಎಂಬಾತನಿಗೆ ಮೂವರು ಸಹೋದರಿಯರು ರಾಖಿ ಕಟ್ಟಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣುಗಳು ಕೂಡ ಒದ್ದೆಯಾಗಿದ್ದವು.
ರಕ್ಷಾಬಂಧನ ಹಬ್ಬಕ್ಕೆಂದು ತಂದು ಮನೆಯಲ್ಲಿ ಇಟ್ಟಿದ್ದ ರಾಖಿಯನ್ನು ಸಹೋದರಿಯರಾದ ಅನ್ನಪೂರ್ಣ, ದುರ್ಗಮ್ಮ ಮತ್ತು ಉಮಾ ಕೊನೆಯ ಬಾರಿ ರಾಖಿಯನ್ನು ಕಟ್ಟುವ ಮೂಲಕ ಒಡಹುಟ್ಟಿದವರ ನಡುವಿನ ಪ್ರೀತಿ, ಅಂತಃಕರಣ ತೋರಿಸಿಕೊಟ್ಟರು. ಅಲ್ಲದೇ ಅಮ್ಮನಿಗೆ 10 ಸಾವಿರ ರೂ. ನೀಡಿದ್ದ ಗವಿಸಿದ್ದಪ್ಪ 5 ಸಾವಿರ ರೂ. ಕಿರಾಣಿ ತಂದು, ಇನ್ನುಳಿದ 5 ಸಾವಿರ ರೂ.ನಲ್ಲಿ ಸೀರೆ ತರುವಂತೆ ಸೂಚಿಸಿದ್ದನಂತೆ. ಸಹೋದರನ ಮೃತದೇಹಕ್ಕೆ ಸಹೋದರಿಯರು ಅಳುತ್ತಲೇ ರಾಖಿ ಕಟ್ಟಿದ ದೃಶ್ಯ ಎಲ್ಲರ ಮನ ಮಿಡಿಯುವಂತಿತ್ತು.
ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಹತ್ಯೆ: ಕೆಲ ವರ್ಷಗಳ ಹಿಂದೆ ನಗರದ ಅಗ್ರೋ ಅಂಗಡಿಯಲ್ಲಿ ಕೆಲಸಕ್ಕಿದ್ದ ಗವಿಸಿದ್ದಪ್ಪನನ್ನು ಸಾಧಿಕ್ ಕೋಲ್ಕಾರ್ ಎಂಬಾತ ಈ ಹತ್ಯೆಗೈದಿದ್ದಾನೆಂದು ದೂರಲಾಗಿದೆ. ಅನ್ಯ ಕೋಮಿನ ಯುವತಿ ಜೊತೆ ಈತ ಪ್ರೀತಿಯಲ್ಲಿ ಬಿದ್ದಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಯುವಕನ ಅಂತ್ಯಕ್ರಿಯೆ ಮುಗಿಸಿದ ಬಳಿಕ ಕುಟುಂಬದವರು ಇಂದು ಸ್ಮಶಾನದಿಂದ ನೇರವಾಗಿ ನಗರದ ಅಶೋಕ ವೃತ್ತಕ್ಕೆ ಬಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ, ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು. ಮುಸ್ಲಿಂ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಕೊಲೆಯ ಶಿಕ್ಷೆಯೇ?. ಇದು ಸರಿಯಲ್ಲ. ಹಿಂದೂಗಳು ಒಗ್ಗಟ್ಟಾಗಿ ಹೋರಾಡುತ್ತೇವೆ. ನಮ್ಮನ್ನೂ ಕೊಂದು ಬಿಡಿ. ಇಲ್ಲವೇ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ್ ಮಾತನಾಡಿ, ಹಿಂದೂಗಳನ್ನು ಗುರಿಯಾಗಿಸಿ ಕೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೆಲ ದಿನಗಳ ಹಿಂದೆ ಬಹದ್ದೂರ್‌ಬಂಡಿ ಗ್ರಾಮದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆಯಾದಾಗ ಪಿಎಸ್‌ಐಗೆ ಕರೆ ಮಾಡಿ, ಹೇಳಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ರೀತಿಯ ಪೊಲೀಸರ ನಿರ್ಲಕ್ಷ್ಯದಿಂದಲೇ ಪ್ರಸ್ತುತ ಹಿಂದೂ ಯುವಕ ಗವಿಸಿದ್ದಪ್ಪನ ಕೊಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಜಿಪಿ ವರ್ತಿಕಾ ಕಟಿಯಾರ್ ಕುಟುಂಬಸ್ಥರೊಂದಿಗೆ ಮಾತನಾಡಿ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು.