Home ನಮ್ಮ ಜಿಲ್ಲೆ ಕೊಪ್ಪಳ ತುಂಗಾ ʼಸುಭದ್ರ’ ಮಾಡದೇ ʼಆರತಿ’ಗೆ ತಯಾರಿ!

ತುಂಗಾ ʼಸುಭದ್ರ’ ಮಾಡದೇ ʼಆರತಿ’ಗೆ ತಯಾರಿ!

0

ಅನಿಲ ಬಾಚನಹಳ್ಳಿ
ಕೊಪ್ಪಳ: ತುಂಗಭದ್ರಾ ಜಲಾಶಯದ ಏಳು ಕ್ರಸ್ಟ್ ಗೇಟ್ ಬಾಗಿವೆ. ಹೀಗಿದ್ದರೂ, ಗೇಟ್ ಅಳವಡಿಸಿ ಜಲಾಶಯ ಭದ್ರ ಮಾಡದೇ, ತುಂಗಭದ್ರಾ ಆರತಿ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಿದ್ದಾರೆ.

ಮೊದಲ ಬಾರಿಗೆ ತಾಲೂಕಿನ ಹುಲಿಗೆಮ್ಮ ದೇವಸ್ಥಾನದ ಬಳಿ ತುಂಗಭದ್ರಾ ಆರತಿ ಮಾಡಲು ತಯಾರಾಗಿರುವುದು ಸ್ವಾಗತಾರ್ಹ. ಆದರೆ, ಎರಡು ದಿನದ ಹಿಂದೆಯಷ್ಟೇ ಜಲಾಶಯದ ಏಳು ಕ್ರಸ್ಟ್ ಗೇಟ್ ಅಪಾಯದಲ್ಲಿರುವ ಮಾಹಿತಿ ಬಹಿರಂಗವಾಗಿದ್ದು, ರೈತರು, ನಾಲ್ಕು ಜಿಲ್ಲೆ ಜನರು ಆತಂಕಗೊಂಡಿದ್ದಾರೆ.

ಈ ಬೆನ್ನಲ್ಲೇ ಗೇಟುಗಳ ಬಗ್ಗೆ ಧ್ವನಿ ಎತ್ತದ ಜಿಲ್ಲೆಯ ಸಂಸದ ಮತ್ತು ಶಾಸಕರಾದ ಹಿಟ್ನಾಳ ಸಹೋದರರು ತುಂಗಭದ್ರಾ ಆರತಿ ಮಾಡಲು ಆಸಕ್ತಿ ತೋರಿರುವುದು ನಾಲ್ಕು ಜಿಲ್ಲೆ ರೈತರು ಮತ್ತು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಕ್ರಸ್ಟ್ ಗೇಟ್ ಸಮಸ್ಯೆಗಳ ಕುರಿತು ಪರಿಶೀಲಿಸಿದ್ದಾರೆ. ಆದರೆ, ಮೂರು ಜಿಲ್ಲೆಯ ಉಸ್ತುವಾರಿ ಸಚಿವರು, ನಾಲ್ಲು ಜಿಲ್ಲೆಯ ಶಾಸಕರು, ಸಂಸದರು ಗಮನ ಹರಿಸದೆ, ಅಧಿವೇಶನಗಳಲ್ಲಿ ತುಟಿ ಬಿಚ್ಚುತ್ತಿಲ್ಲ. ಹಾಗಾಗಿ ಎಲ್ಲ ಪಕ್ಷದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಜಲಾಶಯ ಸುಭದ್ರತೆ ಕೈಗೂಡುತ್ತಿಲ್ಲ.

ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, “ಮೊದಲ ಬಾರಿಗೆ ತುಂಗಭದ್ರಾ ಆರತಿ ಮಾಡುವುದರಲ್ಲಿ ತಪ್ಪೇನಿದೆ. ಕ್ರಸ್ಟಗೇಟ್ ಕೂರಿಸುವ ಕಾರ್ಯ ನಡೆಯುತ್ತದೆ. ರೈತರು ಆತಂಕ ಪಡುವುದು ಬೇಡ. ರೈತರನ್ನು ಕಾಪಾಡುವಂತೆ ತುಂಗಭದ್ರಾ ತಾಯಿಗೆ ಆರತಿ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಇನ್ನು ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, “ಧಾರ್ಮಿಕ ದತ್ತಿ ಇಲಾಖೆ ಮತ್ತು ಹುಲಿಗೆಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ. 26ರಂದು ಮೊದಲ ಬಾರಿಗೆ ತುಂಗಭದ್ರಾ ಆರತಿ ಮಾಡಲು ತೀರ್ಮಾನಿಸಲಾಗಿದೆ. ಇದು ಭಕ್ತರ ಬಹುದಿನದ ಬೇಡಿಕೆಯಾಗಿತ್ತು. ಗಂಗಾ ಮಾತೆಗೆ ಪೂಜೆ ಸಲ್ಲಿಸಿದರೆ ಒಳ್ಳೆಯದಾಗಬಹುದು ಎಂಬ ಭಾವನೆ ಸಹಜ” ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version