Home ನಮ್ಮ ಜಿಲ್ಲೆ ಶಿವಮೊಗ್ಗ ಶಿವಮೊಗ್ಗ: ಅಭಿವೃದ್ಧಿಯಾಗಲಿದೆ ಜೇನುಕಲ್ಲಮ್ಮ ದೇವಾಲಯ

ಶಿವಮೊಗ್ಗ: ಅಭಿವೃದ್ಧಿಯಾಗಲಿದೆ ಜೇನುಕಲ್ಲಮ್ಮ ದೇವಾಲಯ

0

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಾಲಯವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಈ ಕುರಿತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಮಾಹಿತಿಯನ್ನು ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯಕ್ಕೆ ಸಚಿವ ಮಧು ಬಂಗಾರಪ್ಪ ನವರಾತ್ರಿ ಅಂಗವಾಗಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಕೊಡೂರು ಸಮೀಪದ ಜೇನುಕಲ್ಲಮ್ಮ ದೇವಾಲಯದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, “ಇದೊಂದು ಐತಿಹಾಸಿಕ ದೇವಸ್ಥಾನವಾಗಿದ್ದು, ಚಂದ್ರಗುತ್ತಿ ಮಾದರಿಯಲ್ಲಿ ಕೋಡೂರು ದೇವಿಯ ಸ್ಥಳವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕವಾಗಿ ನೆರವಿನೊಂದಿಗೆ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ತಜ್ಞರ ಸಲಹೆ ಹಾಗೂ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು” ಎಂದು ತಿಳಿಸಿದರು.

“ದೇವಾಲಯಕ್ಕೆ ಅಪಾರ ಆರಾಧಕರು ಹಾಗೂ ಉಪಸಕರು ಇರುವುದು ತಿಳಿದಿದೆ. ಇಲ್ಲಿಗೆ ಆಗಮಿಸುವ ಭಕ್ತರ ಅವಶ್ಯಕತೆಗಳಿಗೆ ಪೂರಕವಾಗಿ ಪ್ರವಾಸಿ ಕೇಂದ್ರವನ್ನಾಗಿ ಸೃಜಿಸುವ ಆಶಯ ತಮಗಿದೆ” ಎಂದು ಹೇಳಿದರು.

“ಚಂದ್ರಗುತ್ತಿಯನ್ನು ಸರ್ಕಾರವು ಈಗಾಗಲೇ ಪ್ರಾಧಿಕಾರವನ್ನಾಗಿ ಘೋಷಿಸಿದ್ದು, ಅದರ ಜೀರ್ಣೋದ್ದಾರದ ಕೆಲಸಗಳಿಗಾಗಿ ಮೊದಲ ಕಂತಿನ ಅನುದಾನ ಶೀಘ್ರವೇ ಬಿಡುಗಡೆಗೊಂಡು ಕಾರ್ಯರಂಭಗೊಳ್ಳಲಿದೆ. ಅಲ್ಲಿನ 10 ಎಕರೆ ಅರಣ್ಯ ಭೂಮಿಯನ್ನು ಸರ್ಕಾರದ ಪರ್ಯಾಯ ಭೂಮಿ ಕೊಟ್ಟು ಪಡೆದುಕೊಳ್ಳಲಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗಿದೆ” ಎಂದರು.

“ಎತ್ತರದ ಸ್ಥಳದಲ್ಲಿ ಸ್ಥಾಪಿತವಾಗಿರುವ ದೇವರ ಸನ್ನಿಧಿ, ಆಕರ್ಷಕ ಪರಿಸರ ಹೊಂದಿದೆ. ಅಲ್ಲದೆ ಜೇನುಕಲ್ಲಮ್ಮ ದೇವಿಯ ಪ್ರದೇಶದ ವಿಕಾಸಕ್ಕಾಗಿ ಇಲ್ಲಿನ ಆಡಳಿತ ಮಂಡಳಿ ಸುಮಾರು 26 ಎಕರೆ ಭೂ ಪ್ರದೇಶ ಕಾಯ್ದೆರಿಸಿರುವುದು ಉತ್ತಮವಾಗಿದೆ” ಎಂದು ತಿಳಿಸಿದರು.

“ರಾಜ್ಯದಲ್ಲಿ ಉದ್ದೇಶಿತ ಕೆಪಿಎಸ್‌ ಶಾಲೆಗಳನ್ನು 500 ರಿಂದ 850ಕ್ಕೆ ಹೆಚ್ಚಿಸಿ ಇತ್ತೀಚಿಗೆ ನಡೆದ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲಿನ ಜನರ ಕೋರಿಕೆಯಂತೆ ಕೊಡೂರಿಗೂ ಒಂದು ಕೆಪಿಎಸ್ ಶಾಲೆಯನ್ನು ಮಂಜೂರು ಮಾಡಲಾಗುವುದು” ಎಂದು ಶಿಕ್ಷಣ ಖಾತೆ ಸಚಿವರೂ ಆಗಿರುವ ಮಧು ಬಂಗಾರಪ್ಪ ಭರವಸೆ ನೀಡಿದರು.

“ಇಲ್ಲಿನ ಬಗರ್ ಹುಕುಂ ಸಾಗುವಳಿದಾರರನ್ನು, ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸದಂತೆ ಸರ್ಕಾರವು ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಜನರ ಹಿತ ಸುಖ ಕಾಯುವಲ್ಲಿ ಸರ್ಕಾರ ಬದ್ಧವಾಗಿದ್ದು, ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಆಸರೆ ಒದಗಿಸುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಗಣತಿ ಕಾರ್ಯವನ್ನು ಕೈಗೆಟ್ಟಿಕೊಂಡಿದೆ” ಎಂದರು.

ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ 22ಕೋಟಿ ರೂ. ವೆಚ್ಚದ ನೀಲನಕ್ಷೆ ತಯಾರಿಸಲಾಗಿದೆ. 2.50ಕೋಟಿ ರೂ. ವೆಚ್ಚದ ತೂಗು ಸೇತುವೆ, ಹಾಗೂ 50ಲಕ್ಷ ರೂ. ವೆಚ್ಚದಲ್ಲಿ ಪುಷ್ಕರಣಿ ನಿರ್ಮಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಕಲಗೋಡು ರತ್ನಾಕರ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹೇಳಿದರು.

ದೇವಾಲಯದ ಭೇಟಿ ಕುರಿತು ಸಚಿವರು ಪೋಸ್ಟ್ ಹಾಕಿದ್ದು, ‘ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು ದೇವಿ ಸನ್ನಿಧಿಗೆ ಭೇಟಿ ನೀಡಿ, ದರ್ಶನಾಶೀರ್ವಾದ ಪಡೆದೆನು. ಮಲೆನಾಡಿನ ಆರಾಧ್ಯ ದೇವಿ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನಕ್ಕೆ ನಮ್ಮ ತಂದೆ ಬಂಗಾರಪ್ಪಾಜಿಯವರು ಜೀರ್ಣೋದ್ದಾರಕ್ಕಾಗಿ ಅಂದಿನ ಕಾಲದಲ್ಲಿ ಐವತ್ತು ಸಾವಿರ ರೂಪಾಯಿಗಳನ್ನು ನೀಡಿದ್ದ ಸಂಗತಿಯನ್ನು ಅರ್ಚಕರು ಸ್ಮರಿಸಿ ವಂದಿಸಿದರು. ನಮ್ಮ ಸರ್ಕಾರ ಪ್ರಸ್ತುತ ಈ ವರ್ಷದಲ್ಲಿ ಈ ಒಂದು ದೇವಾಲಯವನ್ನು ಪ್ರವಾಸಿ ತಾಣವಾಗಿ ಘೋಷಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದು’ ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version