Home ನಮ್ಮ ಜಿಲ್ಲೆ ಜಲವಿದ್ಯುತ್ ಹೇರಳ, ದಾಸ್ತಾನು ವಿರಳ

ಜಲವಿದ್ಯುತ್ ಹೇರಳ, ದಾಸ್ತಾನು ವಿರಳ

0

ಹೆಚ್ಚಿನ ಮಳೆಯಾಗುತ್ತಿದೆ. ಹಾಗಾದರೆ ವಿದ್ಯುತ್ ಉತ್ಪಾದನೆ ಹೆಚ್ಚಲಿದೆಯೇ?. ಇಂದಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾದ ಎಚ್. ಆರ್. ಶ್ರೀಶ ಅವರ ಅಂಕಣ ಬರಹ ಓದಿ…

ರಾಜ್ಯದಲ್ಲಿ ಎಲ್ಲ ಕಡೆ ಮಳೆ ಧಾರಾಕಾರ ಸುರಿಯುತ್ತಿದೆ. ಜಲ ವಿದ್ಯುತ್ ಪ್ರತಿದಿನ 52 ದಶಲಕ್ಷ ಯುನಿಟ್ ಲಭಿಸುತ್ತಿದೆ. ಅದಕ್ಕಿಂತ ಹೆಚ್ಚಾಗಿ ಲಿಂಗನಮಕ್ಕಿ, ಸೂಪಾ ಮತ್ತು ಮಾಣೆ ಜಲಾಶಯಗಳಿಗೆ ಪ್ರತಿದಿನ 172 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವಷ್ಟು ನೀರಿನ ಒಳಹರಿವು ಇದೆ. ಮುಂದಿನ 118 ದಿನ ಜಲ ವಿದ್ಯುತ್ ಕೊರತೆ ಇರುವುದಿಲ್ಲ. ಈಗಾಗಲೇ ಶೇ.‌ 48ರಷ್ಟು ಜಲಾಶಯಗಳು ತುಂಬಿವೆ. ಈ ತಿಂಗಳ ಕೊನೆಗೆ ತುಂಬಿ ಹರಿಯುವ ಭರವಸೆ ಇದೆ. ಇದರಿಂದ ಗ್ರಾಹಕರಿಗೆ ದೊರೆಯುವ ಸಂತೋಷ ಎಂದರೆ ಪ್ರತಿ ತಿಂಗಳ ಇಂಧನ ಹೊಂದಾಣಿಕೆದರ ಇರುವುದಿಲ್ಲ.

ಜಲ ವಿದ್ಯುತ್ ಉತ್ಪಾದನಾ ದರ ಕಡಿಮೆ ಇದೆ. ಶರಾವತಿ ಪ್ರತಿ ಯೂನಿಟ್ 12.6ಪೈಸೆ, ವರಾಹಿ 56 ಪೈಸೆ. ಒಟ್ಟು ಜಲ ವಿದ್ಯುತ್ ಸರಾಸರಿ ದರ 52.24 ಪೈಸೆ ಮಾತ್ರ. ಒಂದುವೇಳೆ ಇದೇ ಸಮಯದಲ್ಲಿ ಕಲ್ಲಿದ್ದಲು ಆಧರಿತ ಹಾಗೂ ಇತರೆ ಮೂಲಗಳ ವಿದ್ಯುತ್ ಬಳಸಬೇಕು ಎಂದರೆ ಇಂಧನ ಹೊಂದಾಣಿಕೆ ದರ ಅಧಿಕಗೊಳ್ಳುತ್ತಿದ್ದವು. ಇದರೊಂದಿಗೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಅಧಿಕಗೊಳ್ಳಲಿದೆ. ಮಳೆ ಬಂದಿರುವುದರಿಂದ ಎಲ್ಲ ರೈತರು ಪಂಪ್‌ಸೆಟ್ ಬಳಸುವುದು ಖಂಡಿತ. ರಾಜ್ಯದಲ್ಲಿ 34 ಲಕ್ಷ ಪಂಪ್‌ಸೆಟ್‌ಗಳಿವೆ. ಒಟ್ಟು ಉತ್ಪಾದನೆಯಲ್ಲಿ ಶೇಕಡ 42 ರಷ್ಟು ವಿದ್ಯುತ್ ಕೃಷಿಗೆ ಹೋಗುತ್ತದೆ. 10 ಅಶ್ವಶಕ್ತಿ ಒಳಗೆ ಇರುವ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಬಜೆಟ್‌ನಲ್ಲಿ 19 ಸಾವಿರ ಕೋಟಿರೂ. ನೀಡಲಾಗಿದೆ.

ವಿದ್ಯುತ್‌ಗೆ ನೀಡುವ ಸಬ್ಸಿಡಿ ವ್ಯರ್ಥವಾಗುವುದಿಲ್ಲ. ಅಹಾರ ಉತ್ಪಾದನೆಯ ಮೂಲಕ ಅದು ಜನರಿಗೆ ಹಿಂತಿರುಗಿ ಬರಲಿದೆ. ಈಗ ವಿದ್ಯುತ್ ಉತ್ಪಾದನೆಗಿಂತ ಅದನ್ನು ದಾಸ್ತಾನು ಮಾಡುವ ಕಡೆ ಎಲ್ಲರ ಗಮನ ಹರಿದಿದೆ. ಈಗ ಬೆಳಗಿನ ವೇಳೆ ಅತಿ ಹೆಚ್ಚು ಸೋಲಾರ್ ವಿದ್ಯುತ್ ಲಭಿಸುತ್ತದೆ. ನಾವು ಪ್ರತಿದಿನ 40 ದಶಲಕ್ಷ ಯೂನಿಟ್‌ಜಲ ವಿದ್ಯುತ್‌ನಿಂದ ಪಡೆಯುತ್ತಿದ್ದೇವೆ. ಇದು ಸಂಜೆ 6 ಗಂಟೆಗೆ ಸಂಪೂರ್ಣವಾಗಿ ಬಂದ್ ಆಗುತ್ತದೆ. ಇದರಿಂದ ಗ್ರಿಡ್ ಜಾಲದ ಮೇಲೆ ಹಲವು ಪರಿಣಾಮಗಳಾಗುತ್ತವೆ. ಮೊದಲನೆಯದಾಗಿ ಗ್ರಿಡ್ ಕುಸಿಯದಂತೆ ವಿದ್ಯುತ್ ಪಂಪ್ ಮಾಡಬೇಕು. ಅದಕ್ಕೆ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈಗಿರುವ ತಂತ್ರಜ್ಞಾನದಲ್ಲಿ ರಾತ್ರಿ ವೇಳೆ ವಿದ್ಯುತ್ ದೊರಕುವುದು ಪಂಪ್ಡ್ ಸ್ಟೋರೇಜ್ ನಿಂತ ಮಾತ್ರ.

ಶರಾವತಿಯಲ್ಲಿ ಹರಿದು ಹೋಗುವ ನೀರನ್ನು ಮೇಲಕ್ಕೆ ಮತ್ತೆ ಪಂಪ್ ಮಾಡಿ ಅದರಿಂದ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಲು ಯೋಜಿಸಲಾಗಿದೆ. 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಪಡೆಯುವುದು ಈ ಯೋಜನೆಯ ಉದ್ದೇಶ. ಆದರೆ ಇದಕ್ಕೆ ಹಲವು ಸಮಸ್ಯೆಗಳಿವೆ. ಮೊದಲನೆಯದಾಗಿ ದಟ್ಟ ಕಾಡಿನಲ್ಲಿ ಶರಾವತಿ ಹರಿಯುವುದರಿಂದ ಕಾಡಿಗೆ ಕುತ್ತು ಬರುತ್ತದೆ ಎಂಬುದು ಪರಿಸರವಾದಿಗಳ ತೀವ್ರ ವಿರೋಧ. ಅರಣ್ಯ ಇಲಾಖೆ ಏನೋ ಅನುಮತಿ ನೀಡಿದೆ. ಆದರೆ ಶರಾವತಿ ಕಣಿವೆಯಲ್ಲಿ ಈಗಾಗಲೇ 4 ಯೋಜನೆಗಳು ನಡೆಯುತ್ತಿರುವುದರಿಂದ ಮತ್ತೊಂದು ಯೋಜನೆ ಸೇರ್ಪಡೆ ಮಾಡುವುದು ಸರಿಯಲ್ಲ.

ಪರಿಸರದ ಧಾರಣಾ ಸಾಮರ್ಥ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಭಾವನೆ ಇದೆ. ಇದು ನಿಜವೂ ಹೌದು. ಆದರೆ ಶರಾವತಿ ಜಲ ವಿದ್ಯುತ್ ಅತ್ಯಂತ ಕಡಿಮೆ ದರದಲ್ಲಿ ಲಭಿಸುತ್ತಿರುವುದರಿಂದ ಪಂಪ್ಡ್ ಸ್ಟೋರೇಜ್ ಹೆಚ್ಚು ವೆಚ್ಚವಾಗುವುದಿಲ್ಲ. ಅಲ್ಲದೆ ಮಳೆಗಾಲದಲ್ಲಿ ಸಂಗ್ರಹವಾಗಿರುವ ನೀರನ್ನು ಪುನರ್‌ಬಳಕೆ ಮಾಡಿಕೊಳ್ಳುವುದರಿಂದ ಇಡೀ ವರ್ಷ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ. ಜಲ ವಿದ್ಯುತ್‌ಕೇಂದ್ರವನ್ನು ಯಾವಾಗ ಬೇಕಾದರೂ ಆರಂಭಿಸಬಹುದು. ಅದೇರೀತಿ ನಿಲ್ಲಿಸಬಹುದು. ಇದು ದೀರ್ಘಕಾಲಿಕ ಯೋಜನೆ.

ಇದೇರೀತಿ ಬ್ಯಾಟರಿ ಮೂಲಕ ವಿದ್ಯುತ್ ದಾಸ್ತಾನು ಮಾಡಿ ಬಳಸಬಹುದು. ಇದನ್ನು ಬಿಇಎಸ್‌ಎಸ್ ಎಂದು ಕರೆಯುತ್ತಾರೆ. ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾದನೆಯಾಗುವ ಸೋಲಾರ್ ಮತ್ತು ಜಲ ವಿದ್ಯುತ್ ಬ್ಯಾಟರಿ ಮೂಲಕ ದಾಸ್ತಾನು ಮಾಡಿಕೊಳ್ಳಬಹುದು. ಇದರ ಅನುಕೂಲ ಎಂದರೆ ಎಲ್ಲಿ ಬೇಕಾದರೂ ಸ್ಥಾಪಿಸಬಹುದು. ವಿದ್ಯುತ್ ವಿತರಣ ನಷ್ಟ ಇರುವುದಿಲ್ಲ. ವಿದ್ಯುತ್ ಬೇಡಿಕೆ ನೋಡಿಕೊಂಡು ಬಳಸಬಹುದು. ಇದನ್ನು ಸ್ಥಾಪಿಸುವುದು ಕಷ್ಟವೇನಲ್ಲ.

ಪಂಪ್‌ಡ್ ಸ್ಟೋರೇಜ್ ಪರಿಸರಸ್ನೇಹಿ. ಬ್ಯಾಟರಿಯಿಂದ ಪರಿಸರಕ್ಕೆ ಕೆಲವು ಅನಿಲಗಳು ಸೇರ್ಪಡೆಯಾಗುತ್ತದೆ. ಎರಡೂ ವ್ಯವಸ್ಥೆಯನ್ನು ಹಿತಮಿತವಾಗಿ ಬಳಸಿದರೆ ರಾತ್ರಿ ವಿದ್ಯುತ್ ಕೊರತೆಯನ್ನು ಸರಿತೂಗಿಸಬಹುದು. ಈಗ ರಾಜ್ಯದಲ್ಲಿ ಕೆಪಿಸಿ 2000 ಮೆಗಾವ್ಯಾಟ್ ಮತ್ತು ಖಾಸಗಿ ಕಂಪನಿಗಳ ಮೂಲಕ 1 ಗಿಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಮೂಲಕ ವಿದ್ಯುತ್ ಪಡೆಯುವ ಯೋಜನೆ ಇದೆ. 2031ಕ್ಕೆ 74 ಗಿಗಾವ್ಯಾಟ್ ಪಂಪ್ಡ್ ಸ್ಟೋರೇಜ್‌ನಿಂದ ಪಡೆಯಬೇಕಿದೆ.

ಬ್ಯಾಟರಿ ಮೂಲಕ ವಿದ್ಯುತ್ ದಾಸ್ತಾನು ಮಾಡುವ ಯೋಜನೆಗೆ ಬಂಡವಾಳ ಹೂಡಲು ಖಾಸಗಿ ಕಂಪನಿಗಳು ಮುಂದೆಬರುತ್ತಿವೆ. ಬ್ಯಾಟರಿ ಮೂಲಕ ಈಗ 2-4 ಗಂಟೆ ವಿದ್ಯುತ್ ಪಡೆಯಬಹುದು. ಪಂಪ್ಡ್ಸ್ಟೋರೇಜ್ 6-10 ಗಂಟೆ ವಿದ್ಯುತ್ ಕೊಡಬಲ್ಲುದು. ಬ್ಯಾಟರಿ ಮೂಲಕ ವಿದ್ಯುತ್ ಉತ್ಪಾದನೆಗೆ ಪ್ರತಿಮೆಗಾವ್ಯಾಟ್‌ಗೆ 1.50-1.75 ಕೋಟಿರೂ ಬೇಕು. 12 ರಿಂದ 18 ತಿಂಗಳಲ್ಲಿ ಘಟಕ ಸಿದ್ಧ. 7-15 ವರ್ಷ ಉತ್ತಮ ಸೇವೆ ಪಡೆಯಬಹುದು.

ಪ್ರತಿ ಯೂನಿಟ್ ದರ 5-6 ರೂ. ಆಗಬಹುದು. ಪಂಪ್ಡ್ ಸ್ಟೋರೇಜ್‌ಗೆ ಪ್ರತಿ ಮೆಗಾವ್ಯಾಟ್‌ಗೆ 1 ಕೋಟಿ ರೂ. ಬೇಕು. ಪ್ರತಿ ಯೂನಿಟ್ ದರ 4.50-5 ರೂ. ಒಂದು ಘಟಕ ಸ್ಥಾಪನೆಗೆ 4-5 ವರ್ಷ ಬೇಕು. ಕನಿಷ್ಟ 40 ವರ್ಷ ಸೇವೆ ಕೊಡುತ್ತದೆ. ಈ ಎರಡೂ ವ್ಯವಸ್ಥೆಯನ್ನು ಅಳವಡಿಸಿಕೊಂಡಲ್ಲಿ ರಾತ್ರಿವೇಳೆಯೂ ವಿದ್ಯುತ್ ಕೊರತೆ ಬರುವುದಿಲ್ಲ.

ಈಗ ಜಪಾನ್ ಉಪಗ್ರಹದ ಮೂಲಕ ಸೋಲಾರ್ ವಿದ್ಯುತ್ ಪಡೆಯುವ ತಂತ್ರಜ್ಞಾನವನ್ನು ಕಂಡುಕೊಂಡಿದ್ದು ಇದು ಜನಪ್ರಿಯಗೊಂಡಲ್ಲಿ ರಾತ್ರಿ ವೇಳೆ ವಿದ್ಯುತ್ ಸಮಸ್ಯೆಯೇ ಬರುವುದಿಲ್ಲ. ರಾತ್ರಿ ವೇಳೆ ಸೂರ್ಯ ಭೂಮಿಯ ಮತ್ತೊಂದು ಭಾಗದಲ್ಲಿರುತ್ತಾನೆ. ಅಲ್ಲಿಂದ ನಮ್ಮ ಭಾಗಕ್ಕೆ ಉಪಗ್ರಹದ ಮೂಲಕ ವಿದ್ಯುತ್ ಪಡೆಯಬಹುದು. ಜಪಾನ್ 2 ಗಿಗಾವ್ಯಾಟ್ ವಿದ್ಯುತ್ ಪಡೆಯುವ ಪ್ರಯೋಗದಲ್ಲಿ ಸಫಲಗೊಂಡಿದೆ. ಇದು ನಮ್ಮಲ್ಲೂ ಬಂದಲ್ಲಿ ರಾತ್ರಿ- ಹಗಲು ಎರಡೂ ಒಂದೇ ಎಂಬ ಭಾವನೆ ಮೂಡುವ ದಿನ ದೂರವಿಲ್ಲ. ಆದರೆ ಇದರಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ.

ರಾತ್ರಿ ಕತ್ತಲು ಇರುವುದರಿಂದ ಎಲ್ಲ ಜೀವಿಗಳು ನಿದ್ದೆ ಮಾಡುತ್ತವೆ. ಒಂದು ವೇಳೆ ಎಲ್ಲ ಕಡೆ ಬೆಳಕು ಇರುವಂತೆ ಮಾಡಿದರೆ ಜೀವ ಸಂಕುಲದ ಮೇಲಾಗುವ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ. ರಾತ್ರಿ ವೇಳೆ ವಿದ್ಯುತ್ ದೊರೆತರೂ ಅದನ್ನು ಸಂಪೂರ್ಣವಾಗಿ ಕೈಗಾರಿಕೆಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಬೀದಿದೀಪಗಳಿಗೆ ಮಾತ್ರ ವಿದ್ಯುತ್ ಬಳಸಬಹುದು. ಅದರಿಂದ ರಾತ್ರಿ ವೇಳೆ ಮೋಟಾರು ವಾಹನಗಳ ಅಪಘಾತ ನಡೆಯುವುದನ್ನು ತಪ್ಪಿಸಬಹುದು.

ಈಗಾಗಲೇ ಭೂಮಿ ಸುತ್ತ ಸಾವಿರಾರು ಉಪಗ್ರಹ ಸಂಚರಿಸುತ್ತಿವೆ. ಅವುಗಳು ಒಂದಕ್ಕೊಂದು ಅಡ್ಡಿ ಬಾರದ ಹಾಗೆ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಇನ್ನು ವಿದ್ಯುತ್ ನೀಡುವ ಉಪಗ್ರಹಗಳನ್ನು ಇವುಗಳ ನಡುವೆ ಅಳವಡಿಸಬೇಕು. ಭೂಸ್ಥಿರಕಕ್ಷೆಯಲ್ಲಿ ಉಪಗ್ರಹ ಅಳವಡಿಸಿದರೂ ಅವುಗಳ ಆಯಸ್ಸು 10 ವರ್ಷ. ಮತ್ತೆ ಅವುಗಳನ್ನು ಬದಲಿಸಬೇಕು. ಇವುಗಳ ಮೇಲೆ ಸೈಬರ್ ದಾಳಿ ನಡೆಯದಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ರಾತ್ರಿ ಹಗಲು ಮಾಡುವ ಸಂಶೋಧನೆ ನಿಜಕ್ಕೂ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಹುದು.

Exit mobile version