ರಾಯಚೂರು ನಗರದಲ್ಲಿ ವಿವಿಧ ಕಡೆ ಉಪ ಲೋಕಾಯುಕ್ತರಾದ ಬಿ. ವೀರಪ್ಪ ಗುರುವಾರ ಮಿಂಚಿನ ಕಾರ್ಯಾಚರಣೆ ನಡೆಸಿದರು. ಎರಡು ಸ್ವಯಂ ಪ್ರೇರಿತ (ಸುಮೊಟೊ ಕೇಸ್ ) ದಾಖಲಿಸಲು ಸೂಚನೆ ನೀಡಿದರು.
ಎಪಿಎಂಸಿ ತರಕಾರಿ ಮಾರುಕಟ್ಟೆಯ ನಾನಾ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾದ ಎಪಿಎಂಸಿ ಅಧಿಕಾರಿಗಳ ಮೇಲೆ ಕೇಸ್ ದಾಖಲಿಸಲು ಸೂಚನೆ ಕೊಟ್ಟರು.
ಟೈಮಾಕ್ಸ್ ಮತ್ತು ಹತ್ತಿರದ ಕಾರ್ಖಾನೆಗಳ ಬಳಿಯಲ್ಲಿ ಹರಿಯುತ್ತಿದ್ದ ಕೆಮಿಕಲ್ ಮಿಶ್ರಿತ ಕುಲುಷಿತ ನೀರು ವೀಕ್ಷಣೆ ಮಾಡಿದರು. ಕೆಮಿಕಲ್ ಮಿಶ್ರಿತ ಕಲುಷಿತ ನೀರು ಕೃಷ್ಣಾ ನದಿಗೆ ಸೇರುತ್ತಿದ್ದು, ಪರಿಸರ ಅಧಿಕಾರಿ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ, ಕ್ರಮಕ್ಕೆ ಆದೇಶಿಸಿದರು.
ಕಲುಷಿತ ನೀರು ನದಿಗೆ: ಯದ್ಲಾಪುರ ಗ್ರಾಮ ಪಂಚಾಯತ್ ಪಿಡಿಓ ಮತ್ತು ರಾಯಚೂರು ತಾಲೂಕು ಪಂಚಾಯತ್ ಇಓ ವಿರುದ್ಧವೂ ಕ್ರಮಕ್ಕೆ ಸೂಚನೆ ನೀಡಿದರು. ಕಾರ್ಖಾನೆಗಳ ಬಳಿಯಲ್ಲಿ ಕೆಮಿಕಲ್ ನೀರು ಹರಿಸುತ್ತಿರುವ ಕುರಿತು ಕಾರ್ಖಾನೆಗಳಿಗೆ ನೊಟೀಸ್ ನೀಡಲು ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಚಿಕೊಂಡ ಆಗ್ರೋ ಫುಡ್ ಕಾರ್ಖಾನೆಯಿಂದ ಹೊರ ಬರುತ್ತಿರುವ ಕಲುಷಿತ ನೀರು ವೀಕ್ಷಣೆ ಮಾಡಿದ ಉಪ ಲೋಕಾಯುಕ್ತರು. ಮಂಚಿಕೊಂಡ ಆಗ್ರೋ ಫುಡ್ ಕಾರ್ಖಾನೆಯಿಂದ ಹೊರಬರುವ ನೀರು ಪರಿಶೀಲಿಸಿ ಸಂಜೆಯೊಳಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.
ಕಾರ್ಖಾನೆಗಳ ಕಲುಷಿತ ನೀರಿನಿಂದ ಭತ್ತದ ಬೆಳೆಗೆ ಹಾನಿಯಾಗುತ್ತದೆ ಎಂದು ದೂರು ಕೇಳಿಬಂದವು. ಇದನ್ನು ಪರಿಶೀಲಿಸಿ ವರದಿ ನೀಡಲು ಪರಿಸರ ಅಧಿಕಾರಿಗಳಿಗೆ ಲೋಕಾಯುಕ್ತರ ಸೂಚನೆ ನೀಡಿದರು.