Home ನಮ್ಮ ಜಿಲ್ಲೆ ರಾಯಚೂರು ಐದು ವರ್ಷಗಳ ಹಳೆಯ ಸೈಬರ್ ವಂಚನೆ ಬಯಲು: ಹಣ ಮರುಪಾವತಿ!

ಐದು ವರ್ಷಗಳ ಹಳೆಯ ಸೈಬರ್ ವಂಚನೆ ಬಯಲು: ಹಣ ಮರುಪಾವತಿ!

0

ರಾಯಚೂರು: ಐದು ವರ್ಷಗಳ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣವೊಂದು ಈಗ ಬಯಲಾಗಿದ್ದು, ವಂಚನೆಗೊಳಗಾದ ವ್ಯಕ್ತಿಗೆ 18.29 ಲಕ್ಷ ರೂಪಾಯಿ ಹಣವನ್ನು ಮರುಪಾವತಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ.

ನಗರದ ವಿದ್ಯಾನಗರದ ಲಕ್ಷ್ಮೀಕಾಂತ್ ಎಂಬುವವರು 2020ರಲ್ಲಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ಟ್ರೇಡ್ ಎಂಟಿಎಫ್‌ಎಸ್’ ಎಂಬ ಜಾಹೀರಾತನ್ನು ನೋಡಿದ್ದರು. ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಮೂದಿಸಲಾಗಿತ್ತು. ಜಾಹೀರಾತಿನಲ್ಲಿ ನೀಡಿದ್ದ ಇಮೇಲ್ ಮೂಲಕ ಸಂಪರ್ಕಿಸಿ, 2020ರ ಆಗಸ್ಟ್ 13ರಿಂದ 2021ರ ಏಪ್ರಿಲ್ 7ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 58.57 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದರು.

ಆದರೆ, ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭಾಂಶವಾಗಲಿ ಅಥವಾ ಅಸಲು ಹಣವಾಗಲಿ ಬರದಿದ್ದಾಗ, ಲಕ್ಷ್ಮೀಕಾಂತ್ ಅವರು 2021ರ ಅಕ್ಟೋಬರ್ 25ರಂದು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದರು.

ಸೈಬರ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ವೆಂಕಟೇಶ್ ಉಗಿಬಂಡಿ ತನಿಖೆ ಕೈಗೊಂಡು, ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕರೈ ನಿವಾಸಿ ಬಥುರುಸ್ಮಾನ್ ಎಂಬಾತನಿಂದ ವಂಚನೆ ನಡೆದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆರೋಪಿಯು ತನ್ನ ಸಂಬಂಧಿಕರ ಖಾತೆಗಳಿಗೆ ಅವರಿಗೆ ತಿಳಿಯದಂತೆ ಹಣವನ್ನು ವರ್ಗಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಆದರೆ, ಆರೋಪಿ ಬಥುರುಸ್ಮಾನ್ ಈಗಾಗಲೇ ಮೃತಪಟ್ಟಿದ್ದಾನೆ. ಹಾಗಾಗಿ, ಅವನ ವಿರುದ್ಧ ನ್ಯಾಯಾಲಯದಲ್ಲಿ ಅಬೇಟೆಡ್ ದೋಷಾರೋಪಣ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲಾಗಿದೆ.

ಹಣ ಮರುಪಾವತಿ: ಆರೋಪಿಯ ಹಾಗೂ ಆತನ ಸಹೋದರ ಸಂಬಂಧಿಯ ಖಾತೆಗಳಿಂದ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದ್ದ ಒಟ್ಟು 18,29,425 ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ವಂಚನೆಗೊಳಗಾದ ಲಕ್ಷ್ಮೀಕಾಂತ್ ಅವರಿಗೆ ಹಿಂತಿರುಗಿಸಲಾಗಿದೆ ಎಂದು ಎಸ್ಪಿ ಪುಟ್ಟಮಾದಯ್ಯ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version