ರಾಯಚೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ತಮ್ಮ ಪತ್ನಿ ಉಷಾ ಹಾಗೂ ಕುಟುಂಬ ಸದಸ್ಯರೊಂದಿಗೆ ಪವಿತ್ರ ಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ನೀಡಿ, ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು.
ಇಂದು ಮುಂಜಾನೆ ಮಂತ್ರಾಲಯಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ದಂಪತಿಗಳು, ಮೊದಲಿಗೆ ಗ್ರಾಮದೇವತೆ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ, ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಕೆಲಕಾಲ ಧ್ಯಾನ ಮಾಡಿದ್ದು ವಿಶೇಷವಾಗಿತ್ತು. ಗುರುರಾಯರಲ್ಲಿ ನಾಡಿನ ಒಳಿತಿಗಾಗಿ ಮತ್ತು ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿಕೊಂಡಿರುವುದಾಗಿ ಶಿವಕುಮಾರ್ ತಿಳಿಸಿದರು.
ಬಳಿಕ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿ, ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು, ಡಿ.ಕೆ. ಶಿವಕುಮಾರ್ ಅವರಿಗೆ ಶಾಲು ಹೊದಿಸಿ, ಮಂತ್ರಾಕ್ಷತೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಭೇಟಿಯ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ಹಲವು ದಿನಗಳಿಂದ ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಪಡೆಯಬೇಕೆಂಬ ಇಚ್ಛೆಯಿತ್ತು, ಅದು ಇಂದು ಈಡೇರಿದೆ” ಎಂದರು. ಈ ಹಿಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿಯೂ ಮಂತ್ರಾಲಯಕ್ಕೆ ಭೇಟಿ ನೀಡಿದ್ದನ್ನು ಅವರು ಸ್ಮರಿಸಿದರು. ಅಂದು ಮಾಡಿದ ಸಂಕಲ್ಪದಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಎನ್.ಎಸ್. ಬೋಸರಾಜ್, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರುವಿಹಾಳ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.