ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಿದರು. ಈ ವಿಶೇಷ ಸಂದರ್ಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಜೊತೆ ಇದ್ದರು. ಡಿಜೆಪಿ ಅವರು ಯೋಜನೆಯ ತಾಂತ್ರಿಕ ವಿವರಗಳು, ನಿರ್ಮಾಣದ ಸವಾಲುಗಳು ಹಾಗೂ ಸಾರ್ವಜನಿಕರಿಗೆ ಸಿಗಲಿರುವ ಪ್ರಯೋಜನಗಳ ಬಗ್ಗೆ ಪ್ರಧಾನಿಗೆ ಸಂಪೂರ್ಣ ಮಾಹಿತಿ ನೀಡಿದರು.
ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ ರಾಗಿಗುಡ್ಡ ನಿಲ್ದಾಣದಲ್ಲಿ ಚಾಲನೆ ನೀಡಿದರು. ಉದ್ಘಾಟನೆಯ ನಂತರ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರೊಂದಿಗೆ ಹಳದಿ ಮಾರ್ಗದಲ್ಲಿ ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಮೆಟ್ರೋ ಪ್ರಯಾಣಿಸಿದರು. ಪ್ರಯಾಣದ ವೇಳೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹಳದಿ ಮಾರ್ಗದ ವಿವಿರಣೆ ನೀಡಿದ್ದಾರೆ.. ಬಳಿಕ ಎಲೆಕ್ಟ್ರಾನಿಕ್ ಸಿಟಿ ವರೆಗೆ ರೈಲಿನಲ್ಲಿ ನಿಂತುಕೊಂಡೇ ಪ್ರಯಾಣಿಸಿದರು. ಈ ವೇಳೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅಕ್ಕಪಕ್ಕದಲ್ಲೇ ಕುಳಿತು ಯೋಜನೆ ಕುರಿತು ಮಾತುಕತೆ ನಡೆಸಿದರು.
ಈ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹೋಟ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕಾರ್ಮಿಕ ಮತ್ತು ಸಣ್ಣ ಉದ್ಯಮ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಂಸದರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರೂ ಇದ್ದರು.
ಹೆಣ್ಣು ಪ್ರಗತಿ ಹೊಂದಿದರೆ ಒಂದು ಕುಟುಂಬ, ರಾಜ್ಯ, ದೇಶ ಪ್ರಗತಿ ಆದಂತೆ. ಇದಕ್ಕೆ ನಿದರ್ಶನವೆಂಬಂತೆ ಮಹಿಳಾ ಪೈಲಟ್ ಮೆಟ್ರೋ ಚಲಾಯಿಸಿದ್ದು ಇದು ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿಯ ಸಂಕೇತ. ಈ ವೇಳೆ ನಮ್ಮೊಂದಿಗೆ 16 ವಿದ್ಯಾರ್ಥಿಗಳು, 8 ಜನ ಸಾರ್ವಜನಿಕರು, ಹಳದಿ ಮಾರ್ಗ ನಿರ್ಮಾಣ ಮಾಡಿದ ತಂಡದ 8 ಮಂದಿ ಪ್ರಯಾಣದ ಸಂತಸವನ್ನು ಆನಂದಿಸಿದರು ಎಂದು ಡಿ. ಕೆ. ಶಿವಕುಮಾರ ಹೇಳಿದರು.
ಹಳದಿ ಮಾರ್ಗವು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ 19.15 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗವಾಗಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. 5,056.99 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಐಟಿ ಹಬ್‌ಗಳನ್ನು ನಗರದ ಕೇಂದ್ರ ಭಾಗದೊಂದಿಗೆ ಸಂಪರ್ಕಿಸುತ್ತದೆ.
ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಹಾಗೂ ಇತರ ಜನನಿಬಿಡ ಪ್ರದೇಶಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿಯಿದೆ. ಹಳದಿ ಮಾರ್ಗವು ಆಗಸ್ಟ್ 11ರಿಂದ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ. ಆರಂಭದಲ್ಲಿ ಮೂರು ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸಲಿದ್ದು, 2026ರ ವೇಳೆಗೆ 41 ರೈಲುಗಳೊಂದಿಗೆ ಪ್ರತಿ 2 ನಿಮಿಷಕ್ಕೊಮ್ಮೆ ಸೇವೆ ಒದಗಿಸುವ ಯೋಜನೆ ಇದಾಗಿದೆ.
