Home ನಮ್ಮ ಜಿಲ್ಲೆ ಗುರು-ಶಿಷ್ಯರ ಬಾಂಧವ್ಯ ಪಠ್ಯಕ್ಕೆ ಸೀಮಿತ ಬೇಡ…

ಗುರು-ಶಿಷ್ಯರ ಬಾಂಧವ್ಯ ಪಠ್ಯಕ್ಕೆ ಸೀಮಿತ ಬೇಡ…

0

ಬೆಂಗಳೂರು: ಶಿಕ್ಷಕರು ಹಾಗೂ ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಸಬೇಕೆಂದರೆ ಮಕ್ಕಳಲ್ಲಿ ಸದಾ ಸಕಾರಾತ್ಮಕ ಭಾವನೆಯನ್ನು ಬೆಳೆಸುತ್ತಿರಬೇಕು ಎಂದು ಖ್ಯಾತ ಶಿಕ್ಷಣ ತಜ್ಞ, ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ್ ಕರಜಗಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಿನ್ನೆ ಶನಿವಾರ ನಡೆದ ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿ ಕಾರ್ಯಾಗಾರದಲ್ಲಿ ಶಿಕ್ಷಕನಿಂದ ಗುರುವೆಡೆಗೆ ಪಯಣ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಗುರುರಾಜ ಕರಜಗಿ ಅವರು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ಭವಿಷ್ಯದ ಶಿಕ್ಷಕರು ಜ್ಞಾನ, ಕೌಶಲ್ಯ, ಮನೋಧರ್ಮ ಮತ್ತು ಮೌಲ್ಯಗಳ ವಿಷಯದಲ್ಲಿ ಅವರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರೆ ಶಿಕ್ಷಕನಿಂದ ಒಬ್ಬ ಗುರುವೆಡೆಗೆ ಪಯಣ ಬೆಳೆಸಲು ಸಾಧ್ಯ ಎಂದಿದ್ದಾರೆ.

ಗುರು ಶಿಷ್ಯರ ಬಾಂಧವ್ಯ ಕೇವಲ ಪಠ್ಯ ಕ್ರಮಕ್ಕೆ ಸೀಮಿತ ಆಗಿರಬಾರದು, ಆದರ ಆಚೆಯೂ ಸಂಬಂಧ ಇಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅನುಕೂಲ ಆಗುವ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಿದರೆ ಮಾತ್ರ ಉತ್ತಮ ಗುರು ಆಗಲು ಸಾಧ್ಯ. ವಿದ್ಯಾರ್ಥಿಗಳೂ ಸಹ ವಿನಯ-ವಿಧೇಯತೆಯಿಂದ ಇರುವುದೂ ಸಹ ಇಂದಿನ ದಿನಗಳಲ್ಲಿ ತೀರ ಅಗತ್ಯ ಎಂದರು.

ಗುರು-ಶಿಷ್ಯರ ಪರಂಪರೆ ಬಗ್ಗೆ ಮಾತನಾಡಿದ ಅವರು, ವಿಶ್ವಾಮಿತ್ರರು ರಾಮನಿಗೆ 17ನೇ ವಯಸ್ಸಿನಲ್ಲಿ ರಾಕ್ಷಸರ ವಿರುದ್ಧ ಹೋರಾಡಲು ತರಬೇತಿ ನೀಡಿದ್ದು, ತಾಡಕ, ಮಾರೀಚ ಮತ್ತು ಸುಬಾಹುವಿನಂತ ರಾಕ್ಷಸರನ್ನು ಕೊಲ್ಲಲು ಮಾರ್ಗದರ್ಶನ ಮಾಡಿದ್ದರು. ಅಲ್ಲದೇ ಶ್ರೀಕೃಷ್ಣ-ಅರ್ಜುನ, ಶ್ರೀರಾಮಕೃಷ್ಣ- ಸ್ವಾಮಿ ವಿವೇಕಾನಂದ ಸೇರಿದಂತೆ ಸಮರ್ಥ ರಾಮದಾಸ್- ಶಿವಾಜಿ ಗುರು ಶಿಷ್ಯರ ಬಾಂಧವ್ಯದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಒಬ್ಬ ಶಿಕ್ಷಕನು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಸಬೇಕೆಂದರೆ ಮಕ್ಕಳಲ್ಲಿ ಸದಾ ಸಕಾರಾತ್ಮಕ ಭಾವನೆಯನ್ನು ಬೆಳೆಸುತ್ತಿರಬೇಕು. ತಮ್ಮ ಉಡುಗೆ-ತೊಡುಗೆ ಬಗ್ಗೆ ಗಮನ ಹರಿಸಬೇಕು, ತರಗತಿಗಳಲ್ಲಿ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು, ವಿಷಯದಲ್ಲಿ ಕುತೂಹಲ ಕೆರಳಿಸಬೇಕು, ತಾವು ಮಾಡುವ ಕೆಲಸದ ಬಗ್ಗೆ ಪ್ರೀತಿ ಇರಬೇಕು. ಅದರೆಡೆ ನಿಷ್ಠೆ ಇರಬೇಕು. ಇಂಥದ್ದೇ ಅಂಶಗಳನ್ನು ಮಕ್ಕಳಲ್ಲಿ ತುಂಬಬೇಕು ಅಂದಾಗ ಮಾತ್ರ ಉತ್ತಮ ಗುರುವಾಗಲು ಸಾಧ್ಯ ಎಂಬ ಡಾ. ಗುರುರಾಜ ಕರಜಗಿ ಅವರ ಅನುಭವದ ಮಾತುಗಳು ಶಿಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದವು.

NO COMMENTS

LEAVE A REPLY

Please enter your comment!
Please enter your name here

Exit mobile version