Home ನಮ್ಮ ಜಿಲ್ಲೆ KRS Dam: ತಮಿಳುನಾಡಿಗೆ ನೀರು, ದಾಖಲೆ ಬರೆದ ಕೆಆರ್‌ಎಸ್‌

KRS Dam: ತಮಿಳುನಾಡಿಗೆ ನೀರು, ದಾಖಲೆ ಬರೆದ ಕೆಆರ್‌ಎಸ್‌

0

ಮಂಡ್ಯ: ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯ ಕೆಆರ್‌ಎಸ್ ಅವಧಿಗೂ ಮೊದಲೇ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರಲ್ಲಿಯೂ ಈ ಬಾರಿ ಹೊಸ ದಾಖಲೆ ಬರೆಯಲಾಗಿದೆ. ಕೆಆರ್‌ಎಸ್, ಕಬಿನಿ ಡ್ಯಾಂಗಳಿಂದ ನಿಗದಿತ ಕೋಟಾಕ್ಕಿಂತ 60 ಟಿಎಂಸಿ ಹೆಚ್ಚು ನೀರನ್ನು ಜುಲೈನಲ್ಲಿ ಹರಿಸಲಾಗಿದೆ.

ಕಾವೇರಿ ನದಿ ಪಾತ್ರದ ಮೈಸೂರು ಜಿಲ್ಲೆಯ ಕಬಿನಿ ಹಾಗೂ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ ಈಗಾಗಲೇ ಭರ್ತಿಯಾಗಿವೆ. ಎರಡೂ ಡ್ಯಾಂಗಳಿಗೆ ಬಾಗಿನವನ್ನು ಅರ್ಪಣೆ ಮಾಡಲಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಡ್ಯಾಂಗೆ ಉತ್ತಮ ಒಳಹರಿವು ಇದೆ.

ಈಗಾಗಲೇ ತಮಿಳುನಾಡಿಗೆ ರಾಜ್ಯದಿಂದ ಬರೋಬ್ಬರಿ 100 ಟಿಎಂಸಿ ನೀರು ಹರಿದಿದೆ. ಈ ಹಿಂದೆ ಯಾವ ವರ್ಷದಲ್ಲಿಯೂ ಜೂನ್, ಜುಲೈ ಎರಡು ತಿಂಗಳ ಅವಧಿಯಲ್ಲಿ 100 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿಸಿರುವ ಉದಾಹರಣೆ ಇಲ್ಲ. ಅಲ್ಲದೇ ಜುಲೈ 23ರ ಮಾಹಿತಿಯಂತೆ ಕೆಆರ್‌ಎಸ್‌ನಿಂದ ಹೊರ ಹರಿವು 10,720 ಕ್ಯುಸೆಕ್ ಆಗಿದೆ.

ಸುಪ್ರೀಂಕೋರ್ಟ್‌: ಮಂಡ್ಯದ ಕೆಆರ್‌ಎಸ್‌ನಿಂದ ಬಿಡುಗಡೆ ಮಾಡುವ ನೀರು ನಿತ್ಯವೂ ಕಾವೇರಿ ನದಿ ಮೂಲಕ ಬಿಳಿಗುಂಡ್ಲು ಜಲಾಶಯ ಸೇರುತ್ತಿದೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಈ ಹಿಂದೆಂದೂ ಈ ಪ್ರಮಾಣದ ಕಾವೇರಿ ನೀರು ತಮಿಳುನಾಡಿಗೆ ಹರಿದಿರಲಿಲ್ಲ. ಆದ್ದರಿಂದ ಈ ವರ್ಷ ಹೊಸ ದಾಖಲೆ ನಿರ್ಮಾಣವಾಗಿದೆ.

ಸುಪ್ರೀಂಕೋರ್ಟ್ ಆದೇಶದಂತೆ ವರ್ಷದಲ್ಲಿ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ತಮಿಳುನಾಡಿಗೆ ಶೇಕಡಾ 56ರಷ್ಟು ನೀರು ಹರಿದಿದೆ. ವಾಸ್ತವವಾಗಿ ಜೂನ್‌ನಲ್ಲಿ 9, ಜುಲೈನಲ್ಲಿ 31 ಟಿಎಂಸಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕು. ಆದರೆ 60 ಟಿಎಂಸಿ ಹೆಚ್ಚುವರಿ ನೀರು ಹರಿದಿದೆ.

ತಮಿಳುನಾಡಿಗೆ ಕೆಆರ್‌ಎಸ್ ಹಾಗೂ ಕಬಿನಿ ಎರಡು ಜಲಾಶಯಗಳಿಂದ ನೀರು ಹರಿಸಲಾಗುತ್ತದೆ. ಸದ್ಯ 100 ಟಿಎಂಸಿ ನೀರು ನದಿಗೆ ಬಿಡುಗಡೆ ಆಗಿದೆ. ಕೇರಳ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಲೂ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಕೆಆರ್‌ಎಸ್ ಮತ್ತು ಕಬಿನಿ 2 ಡ್ಯಾಂ ಭರ್ತಿ ಹಿನ್ನೆಲೆಯಲ್ಲಿ ಒಳ ಹರಿವಿನಷ್ಟೇ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆಯುವ ಸಾಧ್ಯತೆ ಕಡಿಮೆ ಎಂಬುದು ಸಮಾಧಾನದ ಸಂಗತಿಯಾಗಿದೆ.

ರೈತರು ಫುಲ್ ಖುಷ್: ದಶಕಗಳ ಬಳಿಕ ರಾಜ್ಯದ ಎರಡೂ ಪ್ರಮುಖ ಜಲಾಶಯಗಳು ಅವಧಿಗೂ ಮೊದಲೇ ಮುನ್ನವೇ ಮೈದುಂಬಿವೆ. ಜೂನ್ ಅಂತ್ಯದಲ್ಲಿಯೇ 124.80 ಅಡಿಯ ಕೆಆರ್‌ಎಸ್ ಭರ್ತಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ್ದರು. ಡ್ಯಾಂ ಭರ್ತಿಯಾಗಿದ್ದು ಕೃಷಿ ಚಟುವಟಿಕೆಗೆ ನೀರು ಸಿಗಲಿದೆ ಎಂದು ರೈತರು ಸಹ ಸಂತಸಗೊಂಡಿದ್ದಾರೆ.

ಕೆಆರ್‌ಎಸ್‌ ಮಂಡ್ಯ, ಮೈಸೂರು ಮತ್ತು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಪ್ರಮುಖ ಜಲಾಶಯವಾಗಿದೆ. ಅವಧಿಗೂ ಮೊದಲೇ ಡ್ಯಾಂ ಭರ್ತಿಯಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಂದಾಜಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version