ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಬಳಿ ಹೇಮಾವತಿ ನದಿ ಮಧ್ಯೆ ಪ್ರವಾಹಕ್ಕೆ ಸಿಲುಕಿದ್ದ ಎರಡು ಹಸುಗಳನ್ನು ಸಾಹಸ ಕಾರ್ಯಾಚರಣೆಯ ಮೂಲಕ ಪಟ್ಟಣದ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ಸುರಕ್ಷಿತವಾಗಿ ರಕ್ಷಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಂಡಿಹೊಳೆ ಗ್ರಾಮದ ಸಿದ್ದೇಗೌಡರ ಮಗ ಹರೀಶ ಎನ್ನುವವರು ತಮ್ಮ ಎರಡು ಹಸುಗಳನ್ನು ಹೇಮಾವತಿ ನದಿ ನಡುವೆ ಇರುವ ಇರುವ ಖಾಲಿ ಜಾಗದಲ್ಲಿ ಎಂದಿನಂತೆ ಮೇಯಲು ಬಿಟ್ಟಿದ್ದರು. ನದಿ ಒಳಗಿನ ಖಾಲಿ ಜಾಗದಲ್ಲಿ ಸಂವೃದ್ದ ಮೇವು ದೊರಕುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದಾಗ ನದಿ ಸೇತುವೆ ಕೆಳಗಿನ ನದಿಯೊಳಗಿನ ಖಾಲಿ ಬಯಲಿನಲ್ಲಿ ಇಲ್ಲಿನ ಜನ ಸಾಮಾನ್ಯವಾಗಿ ತಮ್ಮ ಹಸುಗಳನ್ನು ಮೇಯಲು ಬಿಡುತ್ತಾರೆ.
ಯಾವುದೇ ಪೂರ್ವ ಸೂಚನೆಯಿಲ್ಲದೆ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಅಧಿಕ ನೀರು ಬಿಟ್ಟ ಪರಿಣಾಮ ನದಿ ಮಧ್ಯದ ಖಾಲಿ ಜಾಗವನ್ನು ಬಿಟ್ಟು ಸುತ್ತಲೂ ಪ್ರವಾಹದ ರೀತಿ ನೀರು ಆವರಿಸಿತು. ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಮೇಯುತ್ತಿದ್ದ ಹಸುಗಳು ನದಿಯ ನಡುವೆ ಸಿಲುಕಿ ಹೊರಬರಲಾಗದೆ ಚಡಪಡಿಸುತ್ತಿದ್ದವು.
ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಿ ಹಸುಗಳು ಅಪಾಯಕ್ಕೆ ಸಿಲುಕುತ್ತಿರುವುದನ್ನು ಮನಗಂಡ ಹಸುಗಳ ಮಾಲೀಕ ಹರೀಶ್ ಪಟ್ಟಣದ ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿ ಸಹಾಯಕ್ಕೆ ಕೇಳಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೃಹತ್ ಕ್ರೇನ್ ಮೂಲಕ ಕಾರ್ಯಾಚರಣೆ ಆರಂಭಿಸಿದರು.
ಅಗ್ನಿ ಶಾಮಕ ಸಿಬ್ಬಂದಿಗಳು ನದಿಯೊಳಗೆ ಇಳಿದು ಸುರಕ್ಷತಾ ಹಗ್ಗ ಬಳಸಿ ಕ್ರೇನ್ ಮೂಲಕ ಸುರಕ್ಷಿತವಾಗಿ ಹಸುಗಳನ್ನು ಮೇಲೆತ್ತಿ ಜೀವ ರಕ್ಷಿಸಿದರು. ಕಾರ್ಯಚರಣೆಯ ವೇಳೆ ಬಂಡಿಹೊಳೆ ಹಾಗೂ ಸುತ್ತಮುತ್ತಲ ನೂರಾರು ಜನ ಸ್ಥಳದಲ್ಲಿದ್ದು ಸಾಹಸ ಕಾರ್ಯಾಚರಣೆಯನ್ನು ವೀಕ್ಷಿಸಿ ಅಗ್ನಿ ಶಾಮಕ ಸಿಬ್ಬಂದಿಗಳನ್ನು ಅಭಿನಂದಿಸಿದರು.

ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳಾದ ದಿನೇಶ್, ಪ್ರದೀಪ್ ಕುಮಾರ್, ಸಚಿನ್, ಪ್ರತಾಪ, ಚಂದನ್, ಅಶೋಕ್, ಶ್ರೀಧರ್, ಯಮನಪ್ಪ, ಓಂಕಾರ ಮತ್ತು ಮೌನೇಶ್ ಕಾರ್ಯಾಚರಣೆಯಲ್ಲಿದ್ದು ಸಾರ್ವಜನಿಕರ ಅಭಿನಂದನೆಗೆ ಪಾತ್ರರಾದರು.
ಕನ್ನಡದಲ್ಲಿ ‘ಅಧ್ಯಕ್ಷ’ ಸಿನಿಮಾದಲ್ಲಿ ಬಾವಿಗೆ ಬಿದ್ದಿರುವ ಹಸುವನ್ನು ಕಣ್ಣಿಗೆ ಬಟ್ಟೆ ಕಟ್ಟಿ ರಕ್ಷಣೆ ಮಾಡುವ ದೃಶ್ಯವಿದೆ. ಈ ಕಾರ್ಯಾಚರಣೆಯನ್ನು ನೋಡಿದ ಜನರು ಕೆಲ ಹೊತ್ತು ಸಿನಿಮಾ ನೆನಪು ಮಾಡಿಕೊಂಡರು.