Home ನಮ್ಮ ಜಿಲ್ಲೆ ಮಂಡ್ಯ ಮಂಡ್ಯ: ಗಗನಚುಕ್ಕಿ ಜಲಪಾತೋತ್ಸವ, ಕಾವೇರಿ ಸೊಬಗ ನೋಡ ಬನ್ನಿ

ಮಂಡ್ಯ: ಗಗನಚುಕ್ಕಿ ಜಲಪಾತೋತ್ಸವ, ಕಾವೇರಿ ಸೊಬಗ ನೋಡ ಬನ್ನಿ

0

ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಸೆಪ್ಟೆಂಬರ್ 13 ಹಾಗೂ 14 ರಂದು ವಿಭಿನ್ನವಾಗಿ ವಿಜೃಂಭಣೆಯಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸಿ ಆಚರಿಸಲಾಗುತ್ತದೆ. ಈ ಕುರಿತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಹಿತಿ ನೀಡಿದ್ದಾರೆ. ಗಗನಚುಕ್ಕಿ ಜಲಪಾತೋತ್ಸವದ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಅವರು ಈ ಕುರಿತು ಮಾತನಾಡಿದರು.

“ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಒಟ್ಟು 2.5 ಕೋಟಿ ರೂ. ಅನುದಾನದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಗಹಿಸುವ ಸಾರ್ವಜನಿಕರಿಗೆ ಗುಣಮಟ್ಟದ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಭೋಜನದ ವಿಷಯದಲ್ಲಿ ಯಾವುದೇ ಲೋಪ ಸಂಭವಿಸದಂತೆ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಊಟದ ವ್ಯವಸ್ಥೆ ಮಾಡಲಾಗುವುದು” ಎಂದು ಶಾಸಕರು ಹೇಳಿದರು.

“ಕಾರ್ಯಕ್ರಮದ ಹಾಕಿರುವ ಮಳಿಗೆ ಹಾಗೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಶನಿವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ” ಎಂದರು.

“ಮುಖ್ಯಮಂತ್ರಿಗಳು ಈ ಬಾರಿಯ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ನಡೆಸಲು ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡಿದ್ದಾರೆ. ಕಾರ್ಯಕ್ರಮದ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ” ಎಂದು ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು.

ಲೇಸರ್ ಶೋ: ಜಲಪಾತೋತ್ಸವ ನಡೆಯುವ ಎರಡು ದಿನಗಳ ಕಾಲವೂ ಲೇಸರ್ ಶೋ ಅನ್ನು ಗಗನಚುಕ್ಕಿಯಲ್ಲಿ ಆಯೋಜಿಸಲಾಗಿದೆ. ಪ್ರತಿ ದಿನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲು 40 ಕಲಾ ತಂಡಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ 4 ಕಾಲೇಜುಗಳು ಈಗಾಗಲೇ ಕಲಾ ಪ್ರದರ್ಶನ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ.

“ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಗಗನಚುಕ್ಕಿಯಲ್ಲಿ ನದಿ ನೀರು ಬಳಸಿಕೊಂಡು ಅಕ್ವೇರಿಯಂ ಸ್ಥಾಪನೆ ಮಾಡಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರವು ಸಹ ಸಮ್ಮತಿ ಸೂಚಿಸಿದೆ. ನಾವು ಜಾಗ ಕೊಟ್ಟ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಸುಮಾರು 100 ಕೋಟಿ ವೆಚ್ಚದಲ್ಲಿ ತಗುಲುವ ಸಾಧ್ಯತೆ ಇದೆ. ಕಾಮಗಾರಿ ಪೂರ್ಣಗೊಂಡ ನಂತರ ಮತ್ಸ್ಯಲಯದ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದಗಿರುತ್ತದೆ” ಎಂದು ಶಾಸಕರು ತಿಳಿಸಿದರು.

“ಮಳವಳ್ಳಿ ತಾಲ್ಲೂಕಿನ ಎಲ್ಲಾ ಭಾಗದಿಂದ ಎರಡು ದಿನಗಳ ಕಾಲ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 50 ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ವೇದಿಕೆ ಸಮೀಪದಲ್ಲೇ ನೀಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಿಂದ ಗಗನಚುಕ್ಕಿ ಜಲಪಾತ ನೋಡಲು 25 ಬಸ್ ವ್ಯವಸ್ಥೆ ಮಾಡಲಾಗಿದೆ” ಎಂದು ಶಾಸಕರು ಮಾಹಿತಿ ನೀಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version