Home ನಮ್ಮ ಜಿಲ್ಲೆ ಮಂಡ್ಯ ಡೇರಿಯಲ್ಲಿ ಅವ್ಯವಹಾರ: ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದ ರೈತರು

ಡೇರಿಯಲ್ಲಿ ಅವ್ಯವಹಾರ: ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದ ರೈತರು

0

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಐಕನಹಳ್ಳಿ ಕೊಪ್ಪಲಿನಲ್ಲಿ ಹಾಲು ಸುರಿದು ನ್ಯಾಯಕ್ಕಾಗಿ ಡೇರಿ ಷೇರುದಾರರು ಪ್ರತಿಭಟನೆ ನಡೆಸಿದ್ದಾರೆ. ಡೇರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಅಧ್ಯಕ್ಷೆ, ಕಾರ್ಯದರ್ಶಿ ಮನೆಯ ಮುಂದೆ ಸೋಮವಾರ ಹಾಲು ಸುರಿದಿದ್ದಾರೆ.

ಕಿಕ್ಕೇರಿ ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಬೇಕಿರುವ ಡೇರಿಯಲ್ಲಿ ಬಾರಿ ಅವ್ಯವಹಾರ ನಡೆದಿದ್ದು ಸೂಕ್ತ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಷೇರುದಾರರು, ಹಾಲು ಉತ್ಪಾದಕ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿಯ ಐಕನಹಳ್ಳಿ ಕೊಪ್ಪಲು ಗ್ರಾಮದಲ್ಲಿನ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುವ ರೈತರು ಡೇರಿ ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಸೋಮವಾರ ಧರಣಿ ನಡೆಸಿ, ಹಾಲು ಸುರಿದು ಧಿಕ್ಕಾರ ಕೂಗಿದರು. ಡೇರಿ ಕಾರ್ಯದರ್ಶಿ ಯಶೋಧಾ ದೇವೇಗೌಡ, ಅಧ್ಯಕ್ಷೆ ರಾಧಾ ಕುಮಾರ್ ಇಬ್ಬರು ಸಂಬಂಧಿಕರು.

ಸಂಘದಲ್ಲಿ ಲಕ್ಷಾಂತರ ರೂ. ಭ್ರಷ್ಟಾಚಾರವಾಗಿದೆ. ನಡೆದಿರುವ ಹಗರಣದ ವಿರುದ್ಧ ಹಾಲು ಉತ್ಪಾದಕರು, ಷೇರುದಾರರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ತನಿಖೆಗಾಗಿ ದೂರು ಸಹ ನೀಡಿದ್ದಾರೆ. ತಾವು ತಪ್ಪಿತಸ್ಥರಾಗುವ ಭಯದಿಂದ ಸಂಘದಲ್ಲಿರುವ ನಿರ್ದೇಶಕರಿಗೆ ತಿಳಿಯದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಏಕಾಏಕಿ ಇವರ ಗೈರಿನಿಂದ ಹಾಲು ಉತ್ಪಾದಕರಿಗೆ ಅನ್ಯಾಯ, ತೊಂದರೆಯಾಗುತ್ತಿದೆ ಎಂದು ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ಡೇರಿಗೆ ನಾಲ್ಕೈದು ದಿನಗಳಿಂದ ಕಾರ್ಯದರ್ಶಿ ಬಾರದ ಕಾರಣ ಹಾಲು ವಿತರಣೆಯ ಕಂಪ್ಯೂಟರ್ ಬಿಲ್ ಸಿಗುತ್ತಿಲ್ಲ. ಎಷ್ಟು ಹಾಲು ಹಾಕಿದೆ?, ಇದರ ಹಣದ ಮಾಹಿತಿ ಸಿಗದಾಗಿದೆ.

ಸಂಘ ರೈತರ ಬದುಕಿಗೆ ಸಂಜೀವಿನಿಯಾಗಬೇಕಿತ್ತು. ಇವರ ದುಂಡಾವರ್ತನೆಯಿಂದ ಷೇರುದಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಆಗಬೇಕು ಎಂದು ಮುಖಂಡ ಕಾಂತರಾಜು ಆಗ್ರಹಿಸಿದರು.

ಗ್ರಾಮದ ಹಾಲು ಉತ್ಪಾದಕರು ಅಧ್ಯಕ್ಷೆ, ಕಾರ್ಯದರ್ಶಿ ಮನೆಗೆ ಮುತ್ತಿಗೆ ಹಾಕಿ, ಡೇರಿಗೆ ವಿತರಿಸಲು ಹಾಲಿನ ಕ್ಯಾನ್‍ನಲ್ಲಿ ತಂದಿದ್ದ ಸುಮಾರು 450 ಲೀಟರ್ ಹಾಲನ್ನು ಮನೆ ಮುಂದೆ ಸುರಿದು ಕಿಡಿ ಕಾರಿದರು.

ಮುಖಂಡರಾದ ಮೂರ್ತಿ, ಕಾಂತರಾಜು, ನಾಗರಾಜು, ಪ್ರದೀಪ್, ಗುಂಡ, ಮಂಜಣ್ಣ, ಆನಂದ, ರವಿ, ವೆಂಕಟೇಶ, ನಾಗೇಶ್, ಮಂಜಣ್ಣ, ದಿವಾಕರ, ಪ್ರಸನ್ನ, ದಿಲೀಪ್, ಪ್ರಕಾಶ್, ಸಾಗರ್, ಜಯಮ್ಮ ಮತ್ತಿತರರು ಇದ್ದರು.

ಡೇರಿ ಅಧ್ಯಕ್ಷೆ ರಾಧಾ ಕುಮಾರ್ ಅನಾರೋಗ್ಯದಿಂದ ರಾಜೀನಾಮೆ ನೀಡಿದ್ದಾರೆ. ತನ್ನಿಂದ ಯಾವುದೇ ಅನ್ಯಾಯ, ಮೋಸವಾಗಿಲ್ಲ. ಬೇಕಿದ್ದಲ್ಲಿ ಮೇಲಾಧಿಕಾರಿಗಳು ತನಿಖೆ ಮಾಡಲಿ ಎಂದು ಯಶೋಧಾ ದೇವೇಗೌಡ, ಡೇರಿ ಕಾರ್ಯದರ್ಶಿ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version