ಕಲಬುರಗಿ: ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ ಗ್ರಾಮದ ಬಳಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ, ಸೌಲಭ್ಯ ಒದಗಿಸಿರುವುದರ ಕುರಿತು ಮಾಹಿತಿ ಪಡೆದುಕೊಂಡರು.
ಜಿಲ್ಲೆಯಾದ್ಯಂತ ನಿರಂತರ ಮಳೆ ಬೀಳುತ್ತಿದ್ದು ಭೀಮಾ ನದಿ ತುಂಬಿ ಹರಿಯುತ್ತಿದೆ. ಅಫಝಲ್‌ಪುರ ತಾಲೂಕಿನ ದೇವಲ ಗಾಣಗಾಪುರ ಬಳಿಯ ಭೀಮಾ ತೀರದ ಪ್ರದೇಶಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಕೂಡಾ ಸಚಿವರ ಪರಿಶೀಲಿಸಿ ರೈತರೊಂದಿಗೆ ಮಾತನಾಡಿದರು. ತೊಗರಿ ಸೇರಿದಂತೆ ಇತರೆ ಬೆಳೆ ಹಾನಿಗೀಡಾಗಿರುವುದನ್ನು ಪರಿಶೀಲಿಸಿದ ಸಚಿವರು ಸ್ಥಳದಲ್ಲಿದ್ದ ಕೃಷಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಬೆಳೆ ಹಾನಿಯಾದ ಕುರಿತು ಸಮರ್ಪಕ ಹಾಗೂ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.