Home ನಮ್ಮ ಜಿಲ್ಲೆ ಹಾಸನ ಹಾಸನ: ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯ

ಹಾಸನ: ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯ

0

ಕೆ.ಶಿವಣ್ಣ ಕೆರೆಕೋಡಿ

ಸಂ.ಕ. ಸಮಾಚಾರ, ಕೊಣನೂರು: ಆನೆಗಳ ನಿರಂತರ ಹಾವಳಿಯಿಂದ ಕಂಗೆಟ್ಟಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ರಾತ್ರಿಯಾಗುತ್ತಿದ್ದಂತೆ ಗುಂಪು ಗುಂಪಾಗಿ ಜಮೀನಿಗೆ ನುಗ್ಗುವ ಆನೆಗಳು ಬೆಳೆಗಳನ್ನು ತುಳಿದು, ತಿಂದು ಹೋಗುತ್ತಿವೆ. ಜನರ ಪ್ರಾಣಕ್ಕೂ ಸಂಚಕಾರ ತರುತ್ತಿವೆ. ಈ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೊಡಗಿನ ಆರಣ್ಯದಂಚಿನಲ್ಲಿರುವ ಕೊಣನೂರು ಹೋಬಳಿಯ ತರಿಗಳಲೆ ಗ್ರಾಮ ಕೊಡಗಿನ ನಿಡ್ತ ವಲಯ ಅರಣ್ಯಕ್ಕೆ ಹೊಂದಿಕೊಂಡಂತಿದ್ದು, ಇಲ್ಲಿ ಆನೆಗಳ ಹಾವಳಿ ಸಮಸ್ಯೆಗೆ ಪರಿಹಾರ ಸಿಗದೆ ರೈತರಿಗೆ ದಿಕ್ಕು ತೋಚದಂತಾಗಿದೆ.

ಮೆಕ್ಕೆಜೋಳ, ಸಿಹಿಗೆಣಸು, ಮರಗೆಣಸು, ಶುಂಠಿ, ಭತ್ತದ ಬೆಳೆಯನ್ನು ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ರಾತ್ರಿ ವೇಳೆ ಕಾಡಿನಿಂದ ಹೊರಬರುವ ಆನೆಗಳು ಬೆಳೆ ನಾಶ ಮಾಡುತ್ತಿವೆ. ತೆಂಗಿನ ಸಸಿ ಮತ್ತು ಮರಗಳ ಸುಳಿ ಮತ್ತು ಗರಿಗಳನ್ನು ಎಳೆದು ಹಾಕುತ್ತಿವೆ.

ಆನೆಗಳು ಕಾಡಿನಿಂದ ಹೊರಗೆ ಬಾರದಂತೆ ಸೋಲಾ‌ ತಂತಿಯನ್ನು ಕೆಲ ವರ್ಷಗಳ ಹಿಂದೆ ಆಳವಡಿಸಿದ್ದು, ಈ ಭಾಗದಲ್ಲಿ ಆನೆಗಳ ಹಾವಳಿ ತಗ್ಗಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಸೋಲಾರ್ ತಂತಿ ಹಾಳಾಗಿರುವುದರಿಂದ ಆನೆಗಳು ನಿರಾತಂಕವಾಗಿ ಕಾಡಿನಿಂದ ಹೊರಬರುತ್ತಿವೆ.

ಅಲ್ಲೊಂದು, ಇಲ್ಲೊಂದು ಸೋಲಾರ್‌ ತಂತಿ ಅಳವಡಿಸಿದ್ದ ಕಂಬಗಳು ಕಾಣುತ್ತಿದ್ದು, ಸೋಲಾರ್ ಬ್ಯಾಟರಿ ಮತ್ತು ಪ್ಯಾನಲ್ ಅನಾಥವಾಗಿ ಬಿದ್ದಿವೆ. ಕಾಡಂಚಿನಲ್ಲಿ 20 ಅಡಿ ಗುಂಡಿ ತೆರೆದಿದ್ದರೂ ಗುಂಡಿಯನ್ನು ದಾಟಿ ಆನೆಗಳು ಸಲೀಸಾಗಿ ನಾಡಿಗೆ ಬರುತ್ತಿವೆ.

“ಅನೇಕ ದಿನಗಳಿಂದ ಆನೆಗಳ ಹಾವಳಿ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ, ಬೆಳೆಗಳು ಉಳಿಯುತ್ತಿಲ್ಲ. ಈ ಕುರಿತು ಶಾಸಕರ ಗಮನಕ್ಕೂ ತಂದಿದ್ದೇವೆ” ಎಂದು ರೈತ ಜಯಣ್ಣ ಹೇಳಿದ್ದಾರೆ.

ಕೆಲವು ರೈತರು ಸ್ವಂತ ಖರ್ಚಿನಲ್ಲಿ ಸೋಲಾರ್ ತಂತಿಯನ್ನು ಜಮೀನಿನ ಸುತ್ತ ಅಳವಡಿಸಿಕೊಂಡು ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದರೂ, ಸೋಲಾರ್ ತಂತಿ ಅಳವಡಿಸಿಕೊಳ್ಳಲು ಸಾಧ್ಯವಾಗದ ಬಹುತೇಕ ರೈತರು ಪ್ರಾಣದ ಹಂಗು ತೊರೆದು ರಾತ್ರಿಯಿಡೀ ಪಹರೆ ಕಾದು ಪಟಾಕಿ ಸಿಡಿಸಿ ಬೆಳೆ ರಕ್ಷಣೆಗೆ ಮುಂದಾಗುತ್ತಿದ್ದಾರೆ.

ತರಿಗಳಲೆ ಗ್ರಾಮದ ಮೂಲಕ ಕೊಡಗು ಜಿಲ್ಲೆಗೆ ಹೋಗಬೇಕಿರುವ ರಸ್ತೆಯಲ್ಲಿ ಆನೆಗಳು ಸಂಚರಿಸುತ್ತಿದ್ದು ಸಂಜೆಯಾಯಿತೆಂದರೆ ಆ ರಸ್ತೆಯಲ್ಲಿ ಸಂಚರಿಸುವವರು ಜೀವ ಕೈಯಲ್ಲಿ ಹಿಡಿದು ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತರಿಗಳಲೆ ಸೇರಿದಂತೆ ಅಕ್ಕಪಕ್ಕದ ಹೊಸನಗರ, ಅಕ್ಕಲವಾಡಿ ಸೇರಿ ವಿವಿಧ ಗ್ರಾಮಗಳಿಗೆ ಬರಲು ಪಾರಂಭಿಸಿದ್ದು, ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆನೆಗಳ ಭಯ ಕಾಡುತ್ತಿದೆ.

“ನಾನು ಸಚಿವನಾಗಿದ್ದಾಗ ಈ ಭಾಗದ ಕಾಡಿನಂಚಿಗೆ ಟ್ರಂಚ್ ಮತ್ತು ಸೋಲಾರ್ ತಂತಿಯ ಬೇಲಿಯನ್ನು ಮಾಡಿಸಿ ಆನೆಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು, ಆರಣ್ಯ, ಇಲಾಖೆಯ ಅಧಿಕಾರಿಗಳೊಂದಿಗೆ ಶಾಶ್ವತ ಪರಿಹಾರ ಕೈಗೊಳ್ಳುವ ಕುರಿತು ಈಗಾಗಲೇ ಚರ್ಚೆ ನಡೆಸಿದ್ದು, ಕ್ರಮ ಕೈಗೊಳ್ಳಲಾಗುವುದು” ಎಂದು ಶಾಸಕ ಎ.ಮಂಜು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version