Home ಕ್ರೀಡೆ ಕೊಹ್ಲಿ-ರೋಹಿತ್ ನಿವೃತ್ತಿ: ಆಸ್ಟ್ರೇಲಿಯಾದಲ್ಲಿ ಕೊನೆಯ ಸರಣಿಯೇ?

ಕೊಹ್ಲಿ-ರೋಹಿತ್ ನಿವೃತ್ತಿ: ಆಸ್ಟ್ರೇಲಿಯಾದಲ್ಲಿ ಕೊನೆಯ ಸರಣಿಯೇ?

0

ಭಾರತೀಯ ಕ್ರಿಕೆಟ್‌ನ ಎರಡು ಬೃಹತ್ ಹೆಸರುಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಇದೀಗ ದೊಡ್ಡ ಚರ್ಚೆ ಶುರುವಾಗಿದೆ. ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಈ ಇಬ್ಬರು ದಿಗ್ಗಜರು, 2027ರ ಏಕದಿನ ವಿಶ್ವಕಪ್‌ವರೆಗೂ ತಂಡದಲ್ಲಿ ಮುಂದುವರಿಯುವ ಇರಾದೆ ಹೊಂದಿದ್ದರು.

ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಿಇಒ ಟಾಡ್ ಗ್ರೀನ್‌ಬರ್ಗ್ ಇತ್ತೀಚಿನ ಹೇಳಿಕೆಯು ಈ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಅಕ್ಟೋಬರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಕೊಹ್ಲಿ ಮತ್ತು ರೋಹಿತ್‌ಗೆ ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಬಹುದು ಎಂದು ಗ್ರೀನ್‌ಬರ್ಗ್ ಸೂಚಿಸಿದ್ದಾರೆ.

ಈ ಸರಣಿಯ ವೇಳೆ ಇಬ್ಬರಿಗೂ ವಿಶೇಷ ಬೀಳ್ಕೊಡುಗೆ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸುತ್ತಿದೆ ಎಂಬುದು ಈ ಹೇಳಿಕೆಯ ಸಾರ. ಇದು ಸಹಜವಾಗಿ, 2027ರ ವಿಶ್ವಕಪ್‌ಗೂ ಮೊದಲೇ ಇವರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇಬ್ಬರ ವಯಸ್ಸನ್ನೂ ಪರಿಗಣಿಸಿದರೆ ಈ ನಿರ್ಧಾರ ಅಚ್ಚರಿ ತರುವುದಿಲ್ಲ. 2027ರ ವೇಳೆಗೆ ರೋಹಿತ್‌ಗೆ 40 ವರ್ಷ, ಕೊಹ್ಲಿಗೆ 38 ವರ್ಷ ತುಂಬಿರುತ್ತದೆ. ಹೀಗಾಗಿ, ಮುಂಬರುವ ಏಕದಿನ ಸರಣಿಗಳು ಇವರಿಗೆ ಅತ್ಯಂತ ನಿರ್ಣಾಯಕವಾಗಿವೆ.

ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ತಲಾ 3 ಏಕದಿನ ಪಂದ್ಯಗಳ ಸರಣಿ, ಇವರ ಏಕದಿನ ಭವಿಷ್ಯವನ್ನು ನಿರ್ಧರಿಸಲಿದೆ. ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಪಿಚ್‌ಗಳು ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿವೆ. ಈ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರೆ, 2027ರ ವಿಶ್ವಕಪ್‌ಗೆ ತಂಡವನ್ನು ಕಟ್ಟುವಾಗ ಅವರನ್ನು ಕೈಬಿಡುವ ಸಾಧ್ಯತೆ ಇದೆ.

ಒಂದು ವೇಳೆ ಈ ಸರಣಿಗಳಲ್ಲಿ ವಿಫಲರಾದರೆ, ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯವೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಏಕದಿನ ವೃತ್ತಿಜೀವನದ ಕೊನೆಯ ಪಂದ್ಯವಾಗಬಹುದು. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇದು ಭಾರಿ ಬೇಸರದ ಸಂಗತಿಯಾದರೂ, ಕ್ರಿಕೆಟ್ ಜಗತ್ತು ಹೊಸ ತಲೆಮಾರಿನತ್ತ ಸಾಗುವುದು ಅನಿವಾರ್ಯ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯು ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಪ್ರಾರಂಭವಾಗಿ, ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ಎರಡನೇ ಪಂದ್ಯ ಮತ್ತು ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version