Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: ನಾಲ್ಕೂವರೆ ತಿಂಗಳ ಬಳಿಕ ಹಳೇ ಬಸ್ ನಿಲ್ದಾಣ ಪುನಾರಂಭ

ಹುಬ್ಬಳ್ಳಿ: ನಾಲ್ಕೂವರೆ ತಿಂಗಳ ಬಳಿಕ ಹಳೇ ಬಸ್ ನಿಲ್ದಾಣ ಪುನಾರಂಭ

0

ಹುಬ್ಬಳ್ಳಿ: ಉದ್ಘಾಟನೆಗೊಂಡು ಮೂರು ತಿಂಗಳಿಗೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ನಾಲ್ಕೂವರೆ ತಿಂಗಳುಗಳವರೆಗೆ ಬಂದ್ ಆಗಿದ್ದ ಹಳೇ ಬಸ್ ನಿಲ್ದಾಣ (ಉಪನಗರ ಕೇಂದ್ರ) ಬುಧವಾರ ಪುನರಾರಂಭಗೊಂಡಿದೆ.

ಈ ಮೂಲಕ ನಾಲ್ಕೂವರೆ ತಿಂಗಳಿಂದ ಹೈರಾಣಾಗಿದ್ದ ನಗರ ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ನಿರಮ್ಮಳವಾದವರು. ಅಷ್ಟೇ ಅಲ್ಲ, ಹಳೇ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ (ಫ್ಲೈ ಓವರ್ ಪಕ್ಕ) ವಾಹನ ಸಂಚಾರಕ್ಕೆ ಮುಕ್ತಗೊಳಿಸಿರುವುದರಿಂದ ಬಸ್, ದ್ವಿಚಕ್ರ, ಕಾರು ಸೇರಿದಂತೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಯಿತು. ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿದ್ದ ಕಿತ್ತೂರು ಚನ್ನಮ್ಮ ವೃತ್ತ, ಅಕ್ಕಪಕ್ಕದ ರಸ್ತೆಯಲ್ಲಿ ವಾಹನ ಸಂಚಾರದ ಒತ್ತಡ ಒಂದಿಷ್ಟು ಕಡಿಮೆ ಆಗಿದ್ದು ಕಂಡಿತು.

ಮೇಲ್ಸೇತುವೆ ತ್ವರಿತ ಕಾಮಗಾರಿಗಾಗಿ ಏ. 20ರಿಂದ ಬಸ್ ನಿಲ್ದಾಣ ಸೇರಿ ಮುಂಭಾಗದ ರಸ್ತೆ, ಚನ್ನಮ್ಮ ವೃತ್ತದಿಂದ ಹಳೇ ಕೋರ್ಟ್‌ವರೆಗಿನ ರಸ್ತೆಯನ್ನು ಕಾಮಗಾರಿ ಹಿನ್ನಲೆಯಲ್ಲಿ ಬಂದ್ ಮಾಡಲಾಗಿತ್ತು. ಬಸ್‌ಗಳ ಸಂಚಾರ ಹಾಗೂ ಪ್ರಯಾಣಿಕರ ಓಡಾಟವಿಲ್ಲದೆ ಬಸ್ ನಿಲ್ದಾಣದ ಆವರಣದಲ್ಲಿ ಕಸ, ಕಡ್ಡಿಗಳು ರಾಶಿ ಬಿದ್ದಿದ್ದವು. ನಿಲ್ದಾಣ ಪ್ರವೇಶಿಸುವ ದ್ವಾರದಲ್ಲಿ ಹುಲ್ಲು, ಗಿಡಗಳು ಬೆಳೆದಿದ್ದವು. ಆಸನಗಳೆಲ್ಲ ಧೂಳಿನಿಂದ ಆವೃತವಾಗಿತ್ತು. ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಕಾರ್ಮಿಕರ ಸಹಾಯದಿಂದ ನಿಲ್ದಾಣ ಸ್ವಚ್ಛಗೊಳಿಸಿದ್ದರು.

ಈ ನಿಲ್ದಾಣದಿಂದ ನಗರದ ವಿವಿಧ ಮಾರ್ಗಸೂಚಿಯಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ನೂತನ ನಿಲ್ದಾಣ ಆರಂಭವಾದ ಮೂರು ತಿಂಗಳಲ್ಲೇ ಸ್ಥಗಿತವಾಗಿ, ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಬಸ್‌ಗಳ ಸಂಚಾರ ಆರಂಭವಾಗಿದ್ದು, ಬೆಳಿಗ್ಗೆಯಿಂದ ಹಂತ ಹಂತವಾಗಿ ಬಸ್‌ಗಳನ್ನು ಓಡಿಸಿ ಸಂಜೆ ವೇಳೆ ಪೂರ್ಣ ಪ್ರಮಾಣದಲ್ಲಿ ಬಸ್‌ಗಳ ಕಾರ್ಯಾರಂಭ ಮಾಡಲಾಯಿತು.

ಬಸ್ ನಿಲ್ದಾಣ ಪುನರಾರಂಭಗೊಂಡ ಹಿನ್ನಲೆಯಲ್ಲಿ ಈ ಭಾಗದಲ್ಲಿ ಹೊಂಡ ಬಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ಕಡಿ ಹಾಗೂ ಸಿಮೆಂಟ್‌ನಿಂದ ಮುಚ್ಚಲಾಗಿದೆ. ಧೂಳು ಏಳುವುದರಿಂದ ಆಗಾಗ ನೀರು ಸಿಂಪಡಿಸಲಾಗುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version