ಬೆಂಗಳೂರು ನಗರದ ಜನರು ಬುಧವಾರ ಸಂಜೆಯ ಮಳೆಗೆ ಹೈರಾಣಾಗಿದ್ದಾರೆ. ನಗರದ ರಸ್ತೆಗಳು ಚರಂಡಿಯಂತೆ ಆಗಿದ್ದು, ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಆರಂಭವಾದ ಮಳೆ 9 ಗಂಟೆಯಾದರೂ ಬಿಡುವು ಕೊಟ್ಟಿಲ್ಲ. ಕಛೇರಿಯಿಂದ ಮನೆಗೆ ಹೊರಟ ಜನರು ರಸ್ತೆಯಲ್ಲಿಯೇ ಸಿಲುಕಿದ್ದಾರೆ.
ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನ ಚಾಲಕರು ಪರದಾಡುತ್ತಿದ್ದಾರೆ. ಬಸ್‌ಗಳು ನಿಂತಲ್ಲೇ ಇದ್ದು, ಬಸ್ ನಿಲ್ದಾಣದಲ್ಲಿ ಜನರು ಕಾದು ಕುಳಿತಿದ್ದಾರೆ. ಸಂಚಾರಿ ಪೊಲೀಸರು ಮಳೆಯಿಂದ ಬಂದ್ ಆಗಿರುವ ರಸ್ತೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅನಿಲ್ ಕುಂಬ್ಳೆ ವೃತ್ತದ ಬಳಿ ಮಳೆ ನೀರು ನಿಂತಿರುವುದರಿಂದ ಬಿಆರ್‌ವಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿತ್ತು. ರೆಸಿಡೆನ್ಸಿ ರಸ್ತೆ, ಶಾಂತಿನಗರ, ಲಾಲ್‌ಬಾಗ್ ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆಯಲ್ಲಿ ನೀರು ತುಂಬಿ ಬೈಕ್ ಸವಾರರು ಪರದಾಡಿದರು.
ಮಳೆ ಕಾರಣ ನಿಧಾನಗತಿಯ ಸಂಚಾರ
- ನಾಗಾರ್ಜುನ ಜಂಕ್ಷನ್ ಕಡೆಯಿಂದ ಜಿಡಿ ಮಾರ ಜಂಕ್ಷನ್ ಕಡೆಗೆ
- ರೂಪೇನ ಅಗ್ರಹಾರ ಕಡೆಯಿಂದ ಬೊಮ್ಮನಹಳ್ಳಿ ಕಡೆಗೆ
- ಬೆಳ್ಳಂದೂರು ಜಂಕ್ಷನ್ ಕಡೆಯಿಂದ ಎಚ್‌ಎಸ್‌ಆರ್ ಲೇಔಟ್ ಕಡೆಗೆ
- ಕ್ವೀನ್ಸ್ ಜಂಕ್ಷನ್ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತದ ಕಡೆಗೆ
- ಕಂಟೋನ್ಮೆಂಟ್ ರೈಲ್ವೆ ಅಂಡರ್‌ಪಾಸ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ
- ರೈತರ ಸಂತೆ ಅಂಡರ್‌ಪಾಸ್ ಕಡೆಯಿಂದ ನಗರದ ಕಡೆಗೆ
- ಅರಮನೆ ಕ್ರಾಸ್ ಜಂಕ್ಷನ್ ಕಡೆಯಿಂದ ಚಕ್ರವರ್ತಿ ಲೇಔಟ್ ಕಡೆಗೆ
- ಆರ್‌ಪಿ ರಸ್ತೆ ಕಡೆಯಿಂದ ಪಿಜಿ ಹಳ್ಳಿ ಕಡೆಗೆ
- ಬಿ.ಇ.ಎಲ್. ಯು-ಟರ್ನ್ ಕಡೆಯಿಂದ ಹೆಬ್ಬಾಳ ಕಡೆಗೆ
ಬುಧವಾರ ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಮತ್ತು ಆಗಾಗ ಮಳೆಯಾಗುತ್ತಿತ್ತು. ಆದರೆ ಸಂಜೆ 7 ಗಂಟೆಗೆ ಆರಂಭಗೊಂಡ ಮಳೆ ಬಿಡುವು ನೀಡದ ಕಾರಣ ಜನರು ಪರದಾಡಿದರು. ಪಾನಿಪೂರಿ, ಗೋಬಿ ಮಂಚೂರಿ, ಎಗ್ ರೈಸ್ ಸೇರಿದಂತೆ ಸಂಜೆಯ ಬೀದಿ ಬದಿ ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕುಳಿತರು.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಛೇರಿಗೆ ಆಗಮಿಸಿ ಪೂಜೆ ಸಲ್ಲಿಸಿ ಜಿ.ಬಿ.ಎ ನಾಮಫಲಕ ಉದ್ಘಾಟಿಸಿದರು. ಬಿಬಿಎಂಪಿ ಕಛೇರಿ ಅಧಿಕೃತವಾಗಿ ಗ್ರೇಟರ್ ಬೆಂಗಳೂರು ಆಗಿದೆ. ಗ್ರೇಟರ್ ಬೆಂಗಳೂರು ಮೊದಲ ಮಳೆಗೆ ಹಲವು ಕಡೆ ಮುಳಗಿದೆ.
ಮೆಜೆಸ್ಟಿಕ್, ಟೌನ್ ಹಾಲ್, ಶಾಂತಿ ನಗರ, ಜಯನಗರ, ಲಾಲ್‌ಬಾಗ್, ರೆಸಿಡೆನ್ಸಿ ರಸ್ತೆ, ವಿದ್ಯಾಪೀಠ, ಹನುಮಂತನಗರ, ತ್ಯಾಗರಾಜನಗರ, ಎನ್.ಆರ್.ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಜೆ ಭಾರೀ ಮಳೆಯಾಗಿದೆ. ಮಳೆ ಬರುತ್ತದೆ ಎಂದು ಬೇಗ ಕಛೇರಿಯಿಂದ ಹೊರಟ ಜನರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ನಿಧಾನವಾಗಿ ಮನೆ ಸೇರುತ್ತಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ(ಕೆಎಸ್‌ಎನ್‌ಎಂಡಿಸಿ) ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ ಚದುರದಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಅಲ್ಲದೇ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ಸಾಧ್ಯತೆಯಿದೆ ಎಂದು ಹೇಳಿತ್ತು.