ಹುಬ್ಬಳ್ಳಿ: ಮುಂಬರುವ ರಾಜ್ಯದ ಜಾತಿ ಜನಗಣತಿಯಲ್ಲಿ (ಸಾಮಾಜಿಕ – ಶೈಕ್ಷಣಿಕ – ಆರ್ಥಿಕ ಸ್ಥಿತಿಗತಿ ಸಮೀಕ್ಷೆ) ಲಿಂಗಾಯತ ಸಮಾಜ ಧರ್ಮದ ಬಗ್ಗೆ ಯಾವ ನಿಲುವ ತಳೆಯಬೇಕು ಎಂಬುದರ ಕುರಿತು ಶುಕ್ರವಾರ ಇಲ್ಲಿ ನಡೆದ ವೀರಶೈವ ಲಿಂಗಾಯತರ ಏಕತಾ ಸಮಾವೇಶ ನಿಖರ ನಿರ್ಣಯಕ್ಕೆ ಬರಲಿಲ್ಲ. ವಿಷಯವನ್ನು ಸಮಾಜ ಬಾಂಧವರ ಆತ್ಮಸಾಕ್ಷಿಗೆ ಬಿಟ್ಟು ಸಮಸ್ತ ವೀರಶೈವ ಲಿಂಗಾಯತರೆಲ್ಲ ಒಂದೇ ಎನ್ನುವ ಒಂದು ಸಾಲಿನ ನಿರ್ಣಯವನ್ನು ಮಾತ್ರ ಕೈಗೊಂಡಿತು.
ವೀರಶೈವ ಲಿಂಗಾಯತರು ಹಾಗೂ ಸಮಾಜದ ನೂರು ಉಪ ಪಂಗಡಗಳ ಜನ ಧರ್ಮದ ಕಾಲಂನಲ್ಲಿ `ಆತ್ಮಸಾಕ್ಷಿ’ಯ ನಿರ್ಧಾರವನ್ನು ಬರೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.
`ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ. ಅಥವಾ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬರೆಸಿ. ಆದರೆ ಜಾತಿಯ ಕಾಲಂನಲ್ಲಿ ಮಾತ್ರ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಉಪ ಜಾತಿಗಳ ಕಾಲಂನಲ್ಲಿ ಜಾತಿಯನ್ನು ತಪ್ಪದೇ ನಮೂದಿಸಿ’ ಎಂದು ಖಂಡ್ರೆ ಹೇಳಿದರು.
ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸಂಸದರಾದ ಜಗದೀಶ ಶೆಟ್ಟರ ಮತ್ತು ಬಸವರಾಜ ಬೊಮ್ಮಾಯಿ ಮಾತ್ರ ಪರೋಕ್ಷವಾಗಿ ಹಿಂದೂ ಧರ್ಮವನ್ನೇ ಬರೆಸಬೇಕಾಗುತ್ತದೆ ಎಂದರು. ಸಮಾಜ ಬಾಂಧವರು ಈ ವಿಷಯವಾಗಿ ತಪ್ಪು ನಿರ್ಧಾರ ಮಾಡಬಾರದು. ಮಾಡಿದರೆ ಮುಂದಿನ ದಿನಗಳಲ್ಲಿ ಒಡೆದಿರುವ ಸಮಾಜಕ್ಕೆ ಇನ್ನಷ್ಟು ಹಾನಿ ಎಂಬುದು ಈ ಇಬ್ಬರು ನಾಯಕರ ಒಟ್ಟಾಭಿಪ್ರಾಯವಾಗಿತ್ತು.
`ಲಿಂಗಾಯತ ಸಮಾಜವು ಇಂದಿಗೂ ಹಿಂದೂ ಧರ್ಮದ ಭಾಗ. ಆದರೆ ಲಿಂಗಾಯತ ಸಂಪ್ರದಾಯವನ್ನು ಅನುಸರಿಸುತ್ತೇವೆ. ಸ್ವತಃ ಅಖಿಲ ಭಾರತ ವೀರಶೈವ ಮಹಾಸಭೆಯು ಈ ಬಗ್ಗೆ ಹೇಳಿದೆ’ ಎಂದು ಶೆಟ್ಟರ ನುಡಿದರು.
`ಜಾತಿಗಣತಿಯ ಧರ್ಮದ ಕಾಲಂನಲ್ಲಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಇಲ್ಲ. ಆದ್ದರಿಂದ ವೀರಶೈವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆಯುವವರೆಗೆ ಆಶಾಭಾವನೆಯಿಂದ ಕಾಯೋಣ’ ಎಂದು ಬಸವರಾಜ ಬೊಮ್ಮಾಯಿ ಅರ್ಥಪೂರ್ಣವಾಗಿ ಸಮಾಜಕ್ಕೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ, `ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ಬೇರೊಂದು ಧರ್ಮದ ಅಡಿಯಲ್ಲಿ ವೀರಶೈವರು ಇರಬೇಕಾಗಿಲ್ಲ’ ಎಂದು ಪ್ರತಿಪಾದಿಸಿದರು.
ಭಾಗಿಯಾಗಿದ್ದ ಗುರುವಿರಕ್ತ ಸ್ವಾಮೀಜಿಗಳ ಪರವಾಗಿ ಪ್ರಮುಖ ಭಾಷಣ ಮಾಡಿದ ರಂಭಾಪುರಿ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಡಿ ಕೈಗೊಳ್ಳುವ ನಿರ್ಣಯಗಳಿಗೆ ಸಮಾಜ ಬದ್ಧವಾಗಿರಬೇಕು ಎಂದು ಸೂಚಿಸಿದರು.
ಅಂತಿಮವಾಗಿ ಧರ್ಮದ ಕಾಲಂ ಬಗ್ಗೆ ಯಾವ ನಿಖರ ನಿರ್ಧಾರಕ್ಕೆ ಬರಬೇಕು ಎಂಬುದನ್ನು ಸಮಾಜದ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲು ಸಭೆ ತೀರ್ಮಾನಿಸಿತು. ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಈ ಏಕತಾ ಸಮಾವೇಶವನ್ನು ಸಂಘಟಿಸಿದ್ದರು.