
ಮಂಗಳೂರು/ಉಳ್ಳಾಲ: ಉಳ್ಳಾಲ ಮಸೀದಿ ಎದುರು ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್ ಹಾಕಿದ ಕಿಡಿಕೇಡಿಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಖಾದರ್, ಉಳ್ಳಾಲದಲ್ಲಿ ಸರ್ವಧರ್ಮೀಯರು ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿದ್ದು, ಈ ರೀತಿಯ ಬೆದರಿಕೆ ಸಂದೇಶಗಳ ಮೂಲಕ ಕೋಮು ಸೌಹಾರ್ದ ಕದಡುವ ಹುನ್ನಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೇಮಕಾತಿ ಪ್ರಕ್ರಿಯೆ ಹಳೇ ಪದ್ಧತಿಯಲ್ಲೇ ಮುಂದುವರಿಕೆ: ಜಾರಕಿಹೊಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪೋಸ್ಟ್: ಉಳ್ಳಾಲ ಪಟ್ಟಣದ ಮಸೀದಿ ಎದುರು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಬೆದರಿಕೆ ಪೋಸ್ಟ್ ಹಂಚಿದ ವ್ಯಕ್ತಿಯನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ.
ಇದನ್ನೂ ಓದಿ: KIADB ಸ್ಥಳಾಂತರ ಸ್ಥಗಿತ: ಪಾಟೀಲರ ನಿರ್ಧಾರಕ್ಕೆ ಜೋಶಿ ಅಭಿನಂದನೆ
ಪೌರರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.