Home ಕ್ರೀಡೆ ಏಷ್ಯಾಕಪ್‌ ಕ್ರಿಕೆಟ್‌: ಸಂಜು ಸ್ಯಾಮ್ಸನ್ ಅರ್ಧಶತಕ, ಭಾರತ ಬೃಹತ್‌ ಮೊತ್ತ

ಏಷ್ಯಾಕಪ್‌ ಕ್ರಿಕೆಟ್‌: ಸಂಜು ಸ್ಯಾಮ್ಸನ್ ಅರ್ಧಶತಕ, ಭಾರತ ಬೃಹತ್‌ ಮೊತ್ತ

0

ದುಬೈ: ಪ್ರಸಕ್ತ ಏಷ್ಯಾಕಪ್‌ನಲ್ಲಿ ತಾನಾಡಿದ ಎರಡೂ ಪಂದ್ಯಗಳಲ್ಲಿ ಆಲೌಟ್ ಆಗಿದ್ದಲ್ಲದೇ ಸೋಲನ್ನು ಕಂಡಿರುವ ದುರ್ಬಲ ಓಮನ್ ತಂಡಕ್ಕೆ ಭಾರತ ತಂಡ ಬೃಹತ್ 189 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ. ಅಲ್ಲದೇ, ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶ ಪಡೆಯದ ಸಂಜು ಸ್ಯಾಮ್ಸನ್, ಓಮನ್ ವಿರುದ್ಧ 56 ರನ್‌ಗಳನ್ನು ಗಳಿಸಿ ಅತ್ತ ಟೀಕಾಸ್ತ್ರ, ಇತ್ತ ಎದುರಾಳಿ ತಂಡದ ಬೌಲಿಂಗ್ ಅಸ್ತ್ರಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಸದ್ಯ ಈ ಪಂದ್ಯದಲ್ಲಿ ಭಾರತವೇ ಗೆಲ್ಲುವುದು ಬಹುತೇಕ ಖಚಿತವಾಗಿದ್ದು, ಓಮನ್ ಗೆಲ್ಲಬೇಕಾದರೆ, ಅಸಾಧ್ಯವನ್ನೇ ಸಾಧಿಸಬೇಕಿದೆ.

ಸೂಪರ್ 4 ಹಂತಕ್ಕೂ ಮುನ್ನ ನಡೆದ ಕೊನೆ ಲೀಗ್ ಪಂದ್ಯದಲ್ಲಿ ಟಾಸ್ ಅನ್ನು ಗೆಲ್ಲುವ ಭಾಗ್ಯ ಭಾರತಕ್ಕೆ ಸಿಕ್ಕಿತು. ಇದರಿಂದ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಸೂರ್ಯಕುಮಾರ್ ಯಾದವ್ ಬೃಹತ್ ಮೊತ್ತ ದಾಖಲಿಸುವ ಹುಮ್ಮಸ್ಸಿನಲ್ಲಿದ್ದರು. ಕಳೆದ ಎರಡೂ ಪಂದ್ಯಗಳಲ್ಲಿ 20, 10 ರನ್ ಗಳಿಸಿದ್ದ ಉಪನಾಯಕ ಶುಭಮನ್ ಗಿಲ್, ಈ ಪಂದ್ಯದಲ್ಲಿ ತನ್ನ ರನ್‌ಖಾತೆಯನ್ನು ಕೇವಲ 5 ರನ್‌ಗೆ ಮೀಸಲಿಟ್ಟರು. ಶಾ ಫೈಸಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ ಗಿಲ್, ವಿಕೆಟ್ ಓಮನ್ ತಂಡಕ್ಕೆ ಹುಮ್ಮಸ್ಸು ನೀಡಿತು.

ಇದಾದ ಬಳಿಕ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಡ್ತಿ ಪಡೆದ ಸಂಜು ಸ್ಯಾಮ್ಸನ್ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿ ಮೈದಾಕ್ಕಿಳಿದಿದ್ದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಲಯವನ್ನೇ ಮುಂದುವರೆಸಿದರು. ಇದರಿಂದ ಭಾರತ ಮೊದಲ ಪವರ್‌ಪ್ಲೇನಲ್ಲಿ 60 ರನ್ ಕಲೆ ಹಾಕಿದರು. ಈ ಜೋಡಿ 34 ಎಸೆತಗಳಲ್ಲಿ 66 ರನ್‌ಗಳನ್ನು ಬಾರಿಸಿ ಓಮನ್‌ಗೆ ತಲೆ ನೋವಾದರು. ಆದರೆ, ಅಭಿಷೇಕ್ 15 ಎಸೆತಗಳಲ್ಲೇ 38 ರನ್‌ಗಳಿಸಿ ರಾಮನಂದಿಗೆ ವಿಕೆಟ್ ನೀಡಿದರು. ಇದೇ ಓವರ್‌ನ ಮೂರನೇ ಎಸೆತದಲ್ಲಿ 1 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಕೂಡ ರನೌಟ್‌ಗೆ ಬಲಿಯಾದರು. ಇಲ್ಲಿಂದ ಕೊಂಚ ಇನ್ನಿಂಗ್ಸ್ ನಿಧಾನಗತಿಯಾಗಿ ಸಾಗಿತು.

5ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಿದ ಅಕ್ಷರ್ ಪಟೇಲ್ ಸಮಾಧಾನಕರ ಬ್ಯಾಟಿಂಗ್ ನಡೆಸಿ 26 ರನ್‌ಗಳನ್ನು ಕಲೆ ಹಾಕಿದ್ದಲ್ಲದೇ, ಸಂಜು ಜೊತೆಗೂಡಿ ತಂಡವನ್ನು ನೂರರ ಗಡಿ ದಾಟಿಸಿದರು. ಆದರೆ, ಅಕ್ಷರ್ ವಿಕೆಟ್ ನಂತರ ಶಿವಂ ದುಬೆ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದುಬೆ ಬ್ಯಾಟ್‌ನಿಂದ ಕೇವಲ 5 ರನ್‌ಗಳು ಹರಿದು ಬಂದವು. 6ನೇ ವಿಕೆಟ್‌ಗೆ ಜೊತೆಗೂಡಿದ ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ತಂಡವನ್ನು 150ರ ಗಡಿ ದಾಟಿಸಿದ್ದಲ್ಲದೇ, ಸಂಜು ಕೂಡ ನಿಧಾನವಾಗಿ ಅರ್ಧಶತಕ ಪೂರೈಸಿ, ಹೊರ ನಡೆದರು. ತಿಲಕ್ ವರ್ಮಾ ಕೂಡ 29 ರನ್‌ಗಳಿಸಿದರು. ಹರ್ಷಿತ್ ರಾಣಾ 13 ರನ್‌ಗಳಿಸಿದ್ದರಿಂದ, ಅಂತಿಮವಾಗಿ ಭಾರತ 8 ವಿಕೆಟ್ ಕಳೆದುಕೊಂಡು 188 ರನ್‌ಗಳಿಸಿತು.

ಬ್ಯಾಟಿಂಗ್ ನಡೆಸದ ಸೂರ್ಯ: ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಡೆಸದ ಏಕೈಕ ಆಟಗಾರನಾಗಿ ಉಳಿದುಕೊಂಡರು. ತಂಡದ 10 ಮಂದಿಯನ್ನೂ ಬ್ಯಾಟಿಂಗ್ ಮಾಡಿದ್ದು ವಿಶೇಷ. ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು.

ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಓಮನ್ ತಂಡ 10 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 62 ಗಳಿಸಿತ್ತು. ಗೆಲುವಿಗೆ ಇನ್ನೂ 60 ಎಸೆತಗಳಲ್ಲಿ 127 ರನ್‌ ಸೇರಿಸಬೇಕಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version