Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ Dharmasthala: ಎಸ್‌ಐಟಿ ಮುಂದೆ ಬಂದ ದೂರುದಾರ, ಅನಾಮಿಕ ವ್ಯಕ್ತಿ

Dharmasthala: ಎಸ್‌ಐಟಿ ಮುಂದೆ ಬಂದ ದೂರುದಾರ, ಅನಾಮಿಕ ವ್ಯಕ್ತಿ

0

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ದೂರುದಾರ ಶನಿವಾರ ಎಸ್‌ಐಟಿ ಮುಂದೆ ವಕೀಲರ ಜೊತೆ ಹಾಜರಾಗಿದ್ದಾನೆ.

ಕದ್ರಿಯಲ್ಲಿರುವ ಐಬಿ ಕಚೇರಿಗೆ ದೂರುದಾರ ತನ್ನ ವಕೀಲರ ಜೊತೆ ಆಗಮಿಸಿದ್ದ. ಡಿಐಜಿ ಎಂ.ಎನ್.ಅನುಚೇತ್ ಸಮ್ಮುಖದಲ್ಲಿ ದೂರುದಾರನ ವಿಚಾರಣೆ ನಡೆದಿದೆ. ಎಸ್‌ಐಟಿ ಅಧಿಕಾರಿಗಳು ಹಲವು ಪ್ರಶ್ನೆಗಳಿಗೆ ದೂರುದಾರನಿಂದ ಮಾಹಿತಿ ಪಡೆದಿದ್ದಾರೆ.

ಇದಕ್ಕೂ ಮೊದಲು ಐಬಿ ಕಚೇರಿಯಲ್ಲಿ ಡಿಐಜಿ ಎಂ.ಎನ್.ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ ಹಾಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಎಸ್‌ಐಟಿಗೆ ನೇಮಿಸಲ್ಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದರು.

ಠಾಣೆಗೆ ಭೇಟಿ: ಎಸ್‌ಐಟಿ ಅಧಿಕಾರಿ ಜಿತೇಂದ್ರ ದಯಾಮ ಜು.25ರಂದು ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಅವರು ರಾತ್ರಿಯಾಗುತ್ತಲೇ ಪ್ರಕರಣದ ಕುರಿತಾದ ಮಾಹಿತಿ ಕಲೆಹಾಕುವ ಹಾಗೂ ಅದಕ್ಕೆ ಸಂಬಂಧಿಸಿದ ಕೇಸ್ ಫೈಲ್ ಪಡೆಯಲು ರಾತ್ರಿಯೇ ಠಾಣೆಗೆ ಬಂದಿದ್ದರು. ಠಾಣೆಯ ಎಸ್ಐ ಸಮರ್ಥ್ ಆರ್.ಗಾಣಿಗೇರ್ ಜೊತೆ ಮಾತುಕತೆಯನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಿದ್ದೇನೆ ಎಂದು ಹೇಳಿದ್ದ ಅನಾಮಿಕ ವ್ಯಕ್ತಿಯ ಮುಸುಕು ತೆರವುಗೊಳಿಸಿ ವಿಚಾರಣೆ ನಡೆಸಲಾಗಿದೆ. ಅನಾಮಿಕ ವ್ಯಕ್ತಿಯ ಜೊತೆ ಬಂದಿರುವ ಇಬ್ಬರು ವಕೀಲರನ್ನು ಸಹ ಪ್ರತ್ಯೇಕವಾಗಿ ತನಿಖೆ ನಡೆಸಲಾಗಿದೆ.

ದೂರುದಾರ ಈಗಾಗಲೇ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾನೆ. ಈಗ ಮೊದಲ ಬಾರಿಗೆ ಎಸ್‌ಐಟಿ ಮುಂದೆ ಹಾಜರಾಗಿದ್ದಾನೆ. ತಾನು ಎಲ್ಲೆಲ್ಲಿ ಶವ ಹೂತಿಟ್ಟಿದ್ದೇನೆ? ಎಂಬುದನ್ನು ಬಹಿರಂಗಪಡಿಸಲು ಸಿದ್ಧ ಎಂದು ದೂರುದಾರ ತಿಳಿಸಿದ್ದು, ಹೂತಿಟ್ಟ ಶವಗಳ ಮಹಜರೂ ನಡೆಯಲಿದೆ. ದೂರುದಾರನ ವಿಚಾರಣೆಯಿಂದ ಎಸ್‌ಐಟಿ ತನಿಖೆ ಚುರುಕು ಪಡೆದುಕೊಂಡಿದೆ.

ತನಿಖಾ ತಂಡ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ತನಿಖೆಗೆ ರಾಜ್ಯ ಸರಕಾರವು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ತಂಡದಲ್ಲಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ. ಈ ಎಸ್‌ಐಟಿಗೆ ವಿವಿಧ ಜಿಲ್ಲೆಗಳ 20 ಪೊಲೀಸ್ ಅಧಿಕಾರಿಗಳನ್ನು ಸಹ ಸರ್ಕಾರ ನೇಮಕ ಮಾಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version