Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಮಳೆಯಿಂದ ನಷ್ಟ, ಸರ್ಕಾರಕ್ಕೆ ವರದಿ

ದಾವಣಗೆರೆ: ಮಳೆಯಿಂದ ನಷ್ಟ, ಸರ್ಕಾರಕ್ಕೆ ವರದಿ

0

ಈ ಬಾರಿ ಹಲವು ಜಿಲ್ಲೆಗಳಲ್ಲಿ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದರಿಂದ ಬೆಳೆ ನಷ್ಟವಾಗಿದೆ. ಆದ್ದರಿಂದ ಈ ನಷ್ಟದ ಕುರಿತು ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಲು ಜಿಲ್ಲಾಡಳಿತ ತಯಾರಿಯನ್ನು ನಡೆಸಿವೆ.

ಪ್ರಸಕ್ತ ವರ್ಷದ ಮುಂಗಾರು ಮಳೆಯಿಂದ ಹಾನಿಯಾದ ಬೆಳೆಪ್ರದೇಶ, ಕಟ್ಟಡ, ಇನ್ನಿತರೆ ನಷ್ಟದ ಕುರಿತು ಸಂಪೂರ್ಣ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

ಮಳೆಯಿಂದ ಹಾನಿಗೊಳಗಾದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ನಿಂದ ಕಳೆದ ಬಾರಿ ಜಿಲ್ಲೆಯಲ್ಲಿ ಆದ ಅನಾವೃಷ್ಠಿಗೆ ಬಿಡುಗಡೆಯಾದ ಅನುದಾನಕ್ಕೆ ತಕ್ಕ ನಿಖರ ಮಾಹಿತಿಯನ್ನು ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಹಣ ಸದ್ಬಳಕೆಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಕೃಷಿ, ತೋಟಗಾರಿಕೆ, ಅಂಗನವಾಡಿ, ಶಾಲಾ ಕೊಠಡಿಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ, ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ, ರಸ್ತೆ, ಕೆರೆ, ಸೇತುವೆಗಳು ಸೇರಿದಂತೆ ಕುಡಿಯುವ ನೀರಿನ ಪೈಪ್ ಲೈನ್‍ಗಳು ಹಾನಿಯಾಗಿವೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಈ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂಡಗಳನ್ನು ರಚಿಸಿ, ಪ್ರತಿ ತಂಡದಲ್ಲಿ ಒಬ್ಬ ತಂತ್ರಜ್ಞರನ್ನು ನಿಯೋಜಿಸಿ, ಹಾನಿಯಾದ ವಿವರವನ್ನು ಜಿ.ಪಿ.ಎಸ್ ಆಧಾರಿತ ಪೋಟೋದೊಂದಿಗೆ ನಿಖರವಾದ ವರದಿಯನ್ನು 3 ದಿನಗಳೊಳಗಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಿಸಿ ಗಡುವು ನೀಡಿದರು.

ದಾವಣಗೆರೆ ಜಿಲ್ಲೆಯಾದ್ಯಂತ ಪ್ರಸಕ್ತ ವರ್ಷದಲ್ಲಿ ಸುರಿದ ಅಕಾಲಿಕ ಮಳೆಗೆ ವಿವಿಧ ಇಲಾಖೆ ವ್ಯಾಪ್ತಿಗೆ ಒಳಪಡುವ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 50 ರಿಂದ 100 ಕೋಟಿ ಪ್ರಸ್ತಾವನೆ ಸಲ್ಲಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಆದ್ದರಿಂದ ತಾವೆಲ್ಲರು ಕಟ್ಟಡ, ಹಾನಿ ಆಗಿರುವ ಬಗ್ಗೆ ಎನ್.ಡಿ.ಆರ್.ಎಫ್ ಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುವುದರಿಂದ ಮೂರು ದಿನಗಳೊಳಗಾಗಿ ಮಳೆಯಿಂದ ಆದ ಹಾನಿಯ ಬಗ್ಗೆ ಪ್ರಸ್ತಾವನೆಯನ್ನು ಇಲಾಖೆಯ ಮುಖ್ಯಸ್ಥರು ಸಲ್ಲಿಸಬೇಕು. ವಿಳಂಬವಾದಲ್ಲಿ ಅಥವಾ ಕರ್ತವ್ಯ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 104 ಕಿ.ಮೀ. ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಮಳೆಯಿಂದ ಹಾನಿಯಾಗಿದ್ದನ್ನು ದುರಸ್ತಿ ಮಾಡಿದ ಬಗ್ಗೆ ಮತ್ತು ಹಾನಿಯಾಗಿರುವ ಬಗ್ಗೆ ಪ್ರತ್ಯೇಕವಾಗಿ ವರದಿ ನೀಡಬೇಕು. ಮಳೆಗೆ ಮೊದಲು 57 ಕೆರೆ ಒಡಲು ತುಂಬಿಸಲಾಗಿತ್ತು. ಹಿಂಗಾರಿನಲ್ಲಿ ಸುರಿದ ಮಳೆಗೆ ಕೆರೆಗಳ ಕಟ್ಟೆ, ಕೋಡಿ ಒಡೆದು ಶಿಥಿಲಾವಸ್ಥೆಗೆ ತಲುಪಿರುವ ಕುರಿತು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version