Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಿದ್ರೆ ಉಗ್ರ ಹೋರಾಟ

ದಾವಣಗೆರೆ: ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಿದ್ರೆ ಉಗ್ರ ಹೋರಾಟ

0

ದಾವಣಗೆರೆ: ಇವಿಎಂನಲ್ಲಿ ಗೆಲ್ಲುವುದಾಗಿದ್ದರೆ ದೇಶದ ಕೆಲವು ದೊಡ್ಡ ರಾಜ್ಯಗಳಲ್ಲೇ ನಾವೆ ಗೆದ್ದಿರುತ್ತಿದ್ದೆವು. ಇದನ್ನು ಅರ್ಥೈಸಿಕೊಳ್ಳದ ಕಾಂಗ್ರೆಸ್ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಬಳಸಲು ಶಿಫಾರಸ್ಸು ಮಾಡುವ ಮೂಲಕ ಪುರಾತನ ಕಾಲದ ಕಡೆಗೆ ಹೋಗುತ್ತಿದೆ. ಹಾಗೊಂದು ವೇಳೆ ರಾಜ್ಯದಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡುವುದಕ್ಕೆ ಮುಂದಾದರೆ ಬಿಜೆಪಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಲಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶವನ್ನು ಹೆಚ್ಚು ಕಾಲ ತಾವೇ ಆಳ್ವಿಕೆ ಮಾಡಿದ್ದೇವೆನ್ನುವ ಕಾಂಗ್ರೆಸ್ ಸರ್ಕಾರ ವಿದ್ಯುನ್ಮಾನ ಮತ ಯಂತ್ರದಲ್ಲಿ ಏನು ಸಮಸ್ಯೆ ಇದೆಯೆಂಬುದನ್ನು ಹೇಳುವುದಕ್ಕೂ ತಯಾರಿಲ್ಲ. ಇದೇ ಇವಿಎಂ ಮೂಲಕ ನಡೆದ ಚುನಾವಣೆಯಲ್ಲಿ 136 ಕ್ಷೇತ್ರ ಗೆದ್ದು ಅಧಿಕಾರಕ್ಕೆ ಬಂದಿದ್ದನ್ನೇ ಮರೆತಂತಿದೆ ಎಂದು ಕುಟುಕಿದರು.

ಇವಿಎಂನಲ್ಲಿ ಗೆಲ್ಲುವುದಾಗಿದ್ದರೆ ದೇಶದ ಕೆಲವು ದೊಡ್ಡ ರಾಜ್ಯಗಳಲ್ಲೇ ನಾವೆ ಗೆದ್ದಿರುತ್ತಿದ್ದೆವು. ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ರಾಜ್ಯಗಳನ್ನೂ ನಾವು ಗೆದ್ದಿರುತ್ತಿದ್ದೆವು. ಇಡೀ ಜಗತ್ತು ತಂತ್ರಜ್ಞಾನ ಕಡೆ ಹೋಗುತ್ತಿದ್ದರೆ, ಕಾಂಗ್ರೆಸ್ಸಿಗರು ತಾವು ಶಿಲಾಯುಗದ ಕಡೆ ಹೋಗುತ್ತೇವೆನ್ನುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ ಹೇಳಿದ ಕಾರಣಕ್ಕೆ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುತ್ತೇವೆಂದು ರಾಜ್ಯ ಸರ್ಕಾರ ಹೇಳುತ್ತಿರುವುದೇ ಹಾಸ್ಯಾಸ್ಪದ ಎಂದರು.

ಬುರುಡೆ ಬಗ್ಗೆ ತನಿಖೆಯಾಗಬೇಕು: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ಬುರುಡೆ ಕಸ್ತೂರ ಬಾ ಮೆಡಿಕಲ್ ಕಾಲೇಜಿನಿಂದ ಬಂದಿತಾ? ತಲೆ ಬುರುಡೆ ತಂದಿದ್ದು ಯಾರು, ಎಲ್ಲಿಂದ ತಂದರು, ಅದರ ಹಿನ್ನೆಲೆ ಏನೆಂಬ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಕೇರಳ, ತಮಿಳುನಾಡಿನ ಕೆಲ ಯುಟ್ಯೂಬರ್‌ಗಳು ಧರ್ಮಸ್ಥಳದ ಹೆಸರನ್ನು ಹಾಳುಗೆಡುವುದಕ್ಕೆ ದೊಡ್ಡ ಪಿತೂರಿ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ನೇತಾರರೂ ಇದ್ದಾರೆ. ಬುದ್ಧಿ ಜೀವಿ, ಕಮ್ಯುನಿಷ್ಟರ್, ಹಳೆಯ ಪತ್ರಕರ್ತರೂ ಇದ್ದಾರೆ. ಈ ಎಲ್ಲರ ಬಗ್ಗೆಯೂ ಎಸ್‌ಐಟಿಯಿಂದ ತನಿಖೆ ಸಾಧ್ಯವಿಲ್ಲ. ಹೊರ ರಾಜ್ಯದವರೂ ಈ ಷಡ್ಯಂತ್ರದ ಹಿಂದಿರುವ ಹಿನ್ನೆಲೆಯಲ್ಲಿ ಎನ್‌ಐಎ ಮೂಲಕವೇ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version