ಕಲಬುರಗಿ: “ಎಸ್‌ಸಿಸಿಪಿ/ ಟಿಎಸ್‌ಪಿ ಅನುದಾನ ಬೇರೆ ಕಡೆ ಬಳಕೆ ಆಗಿದ್ದರೆ ಆ ಬಗ್ಗೆ ಬಿಜೆಪಿ ದಾಖಲೆ ನೀಡಲಿ, ಆಗ ಕ್ರಮ ಜರುಗಿಸಲಾಗುವುದು” ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಕಲಬುರಗಿಯಲ್ಲಿ ಸೋಮವಾರ ಮಾತನಾಡಿ, “ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುವುದು, ಜನರ ದಾರಿ ತಪ್ಪಿಸುವುದನ್ನು ಬಿಟ್ಟು ಸರ್ಕಾರಕ್ಕೆ ದಾಖಲೆ ಒದಗಿಸಲಿ. ಬಿಜೆಪಿ ಕಾಲದಲ್ಲಿ ಎಸ್‌ಸಿಪಿ/ ಟಿಎಸ್‌ಪಿ ಅನುದಾನ ಬೇರೆ ಕಡೆ ಹೋಗಿತ್ತು. ಅದನ್ನು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದರು. ಈಗ ಅದೇ ಬಿಜೆಪಿ ನಾಯಕರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಆರೋಪಗಳಿಗೆ ಸದನದಲ್ಲೇ ಉತ್ತರ ನೀಡಲಾಗಿದೆ” ಎಂದರು.
ಕೇಂದ್ರದಿಂದ ಅನುದಾನ ತರಲಿ: “ದಲಿತರ ಬಗ್ಗೆ ಆದಿವಾಸಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬಿಜೆಪಿ ನಾಯಕರು ಕೇಂದ್ರದಿಂದ ಅನುದಾನ ತರಿಸಿಕೊಡಲಿ” ಎಂದು ಸವಾಲು ಹಾಕಿದ ಸಚಿವರು, “ಬಿಜೆಪಿ ಆಡಳಿತವಿರುವ ರಾಜ್ಯದಲ್ಲಾದರೂ ಅನುದಾನ ಒದಗಿಸಲಿ” ಎಂದು ಆಗ್ರಹಿಸಿದರು.
“ಎಲ್ಲಾ ಶಾಸಕರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡುವುದು ತಪ್ಪಲ್ಲ. ಅಂದು ಬಿಜೆಪಿ ಸರ್ಕಾರ ಇದ್ದಾಗಲೂ ಕೂಡಾ ನಮಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗಲಾಗಿತ್ತು. ಈ ಬಗ್ಗೆ ನಾನು ಹಲವಾರು ಬಾರಿ ಹೇಳಿದ್ದೇನೆ” ಎಂದು ಶಾಸಕರ ಕ್ಷೇತ್ರದ ಅನುದಾನ ಬಿಡುಗಡೆ ಬಗ್ಗೆ ಮಾತನಾಡಿದರು.
ಯೂರಿಯಾ ಸರಬರಾಜಿಗೆ ಕೇಂದ್ರಕ್ಕೆ ಮನವಿ : “ಯೂರಿಯಾ ಕೊರತೆ ಅಷ್ಟೊಂದು ಕಾಣಿಸುತ್ತಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಯೂರಿಯಾ ಗೊಬ್ಬರ ಸರಬರಾಜಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಸಲ ನಮಗೆ ಅಗತ್ಯವಿರುವ ಗೊಬ್ಬರ ಸರಬರಾಜು ಮಾಡಿಲ್ಲ. ರಾಜ್ಯದ ಓಪಿನಿಂಗ್ ಬ್ಯಾಲೆನ್ಸ ಅನ್ನು ಬೇಡಿಕೆಯಲ್ಲಿ ಕಡಿತಗೊಳಿಸಿದ ಕೇಂದ್ರ ಸರ್ಕಾರ ಉಳಿದ ರಸಗೊಬ್ಬರ ಸರಬರಾಜು ಮಾಡಿದೆ. ಈ ಹಿಂದೆ ರಾಜ್ಯದ ಓಪಿನಿಂಗ್ ಬ್ಯಾಲೆನ್ಸ್ ನ್ನು ಪರಿಗಣಿಸುತ್ತಿರಲಿಲ್ಲ” ಎಂದರು.
“ಕಲಬುರಗಿ ಜಿಲ್ಲೆಯಲ್ಲಿ ಈ ಸಲ 100% ಬಿತ್ತನೆಯಾಗಿದೆ. 500 ಟನ್ ಗೊಬ್ಬರ ಬೇಡಿಕೆ ಇದ್ದು, 200 ಟನ್ ಗೊಬ್ಬರವನ್ನು ಬಾಗಲಕೋಟೆಯಿಂದ ತರಸಲಾಗುತ್ತಿದೆ. ಉಳಿದ 300 ಟನ್ ರಸಗೊಬ್ಬರವನ್ನು ಆದಷ್ಟು ಬೇಗ ತರಿಸಲಾಗುವುದು. ರಸಗೊಬ್ಬರ ವಿಚಾರದಲ್ಲಿ ಇಲ್ಲಿ ಪ್ರತಿಭಟನೆ ಮಾಡುವ ಬದಲು ಬಿಜೆಪಿಗರು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿ ರಾಜ್ಯಕ್ಕೆ ಗೊಬ್ಬರ ತರಿಸಿಕೊಡಲಿ” ಎಂದು ಸಲಹೆ ನೀಡಿದರು.
ಕೇಂದ್ರಿಯ ವಿವಿಗಳು ಆರ್‌ಎಸ್‌ಎಸ್ ಶಾಖೆ: ಸಚಿವ ಪ್ರಿಯಾಂಕ್ ಖರ್ಗೆ, “ಕೇಂದ್ರಿಯ ವಿಶ್ವವಿದ್ಯಾಲಯಗಳು ಆರ್‌ಎಸ್‌ಎಸ್ ಶಾಖೆಗಳಾಂತಾಗಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ. ಖರ್ಗೆ ಸಾಹೇಬರು ಈ ಭಾಗಕ್ಕೆ ಅನುಕೂಲ ಆಗಲಿ ಎಂದು ಜಿಲ್ಲೆಗೆ ಕೇಂದ್ರೀಯ ವಿವಿ ತಂದರು. ಆದರೆ, ಅದು ಆರ್‌ಎಸ್‌ಎಸ್ ಶಾಖೆ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ” ಎಂದು ಟೀಕಿಸಿದರು.
ತಮ್ಮ ಬಗ್ಗೆ ಬಿಜೆಪಿ ನಾಯಕರು ಅವಹೇಳನಕಾರಿ ಟೀಕೆ ಮಾಡಿದ್ದನ್ನು ಪ್ರಸ್ತಾಪಿಸಿದ ಸಚಿವರು, “ನನ್ನ ಬಗ್ಗೆ ಸದನದಲ್ಲೇ ಬಿಜೆಪಿಯವರು ಅವಹೇಳನ ರೀತಿಯಲ್ಲಿ ಮಾತನಾಡಿದ್ದಾರೆ. ನನ್ನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಅಂದರೆ ಅವರಿಗೆ ಆರ್‌ಎಸ್‌ಎಸ್‌ನಲ್ಲಿ ಬೆಲೆ ಇರುವುದಿಲ್ಲ, ಅವರಿಗೆ ಮುಂಬಡ್ತಿ ಸಿಗುವುದಿಲ್ಲ. ಬಿಜೆಪಿ ನಾಯಕರು ಬಹಿರಂಗ ವೇದಿಕೆಗೆ ಬರಲಿ ನಾನೊಬ್ಬನೇ ಸಾಕು ಅವರು ಏನೇನೂ ಹೇಳಿದ್ದಾರೆ ಎಲ್ಲಾ ವಿವರವಾಗಿ ಹೇಳುತ್ತೇನೆ” ಎಂದು ಸವಾಲು ಹಾಕಿದರು.
2023-24 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ 34000 ಕೋಟಿ ಅನುದಾನದಲ್ಲಿ ಸುಮಾರು 24000 ಕೋಟಿ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗಾಗಿ ಉಪಯೋಗಿಸಿಕೊಂಡಿದ್ದೀರಲ್ಲಾ ಅದೆಲ್ಲಾ ಮರೆತೋಯ್ತಾ. ಕೇವಲ ಮತ್ತು ಕೇವಲ ಸುಳ್ಳನ್ನೆ ಏರು ಧ್ವನಿಯಲ್ಲಿ ಬೊಗಳೀ ಬೊಗಳೀ ಜನರನ್ನು ದಾರಿ ತಪ್ಪಿಸುತ್ತಿರುವವರು ನೀವೇ. ನಿಮ್ಮ ಅಸಮರ್ಥ ಆಡಳಿತ ಮತ್ತು ಖಜಾನೆ ದೀವಾಳಿಯಾಗಿದ್ದರೂ ಭಂಡತನದಿಂದ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸಾಲದಲ್ಲಿ ತಂದು ಆಡಳಿತ ನಡೆಸುತ್ತಿರುವ ನಮ್ಮದೂ ಒಂದು ಸರ್ಕಾರವೇ????.