ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್ .ಎಮ್.ಡಿ ವಿರುದ್ಧ ದಾಖಲಾದ ಧರ್ಮಸ್ಥಳ ಪ್ರಕರಣ ಸಂಬಂಧ ಸದ್ಯ ನಿರೀಕ್ಷಣಾ ಜಾಮೀನು ಪಡೆದಿದ್ದು, ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ.
ಆ. 24 ರಂದು ಭಾನುವಾರ ಮುಂಜಾನೆ 10.30ಕ್ಕೆ ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್ ಮಧ್ಯಾಹ್ನ 1 ಗಂಟೆಗೆ ಕೂಲಿಂಗ್ ಗ್ಲಾಸ್ ಧರಿಸಿಕೊಂಡು ವಕೀಲರೊಂದಿಗೆ ಮುಗುಳ್ನಗೆಯೊಂದಲೇ ಹಾಜರಾಗಿದ್ದಾನೆ.
ಒಟ್ಟು ನಾಲ್ಕು ಪ್ರಕರಣಗಳಾದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಗುಂಪು ಸೇರಿ ಹಲ್ಲೆ, ಖಾಸಗಿ ವಾಹಿನಿಯ ವರದಿಗಾರನಿಗೆ ಹಲ್ಲೆ, ಧರ್ಮಸ್ಥಳ ಯೂಟ್ಯೂಬ್ ಕೇಸ್, ಹುಬ್ಬಳ್ಳಿ ಪ್ರಕರಣ ಬೆಳ್ತಂಗಡಿ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಗೆ ಹಾಜರಾಗಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ವಿಚಾರಣೆ ನಡೆಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ತೊಂದರೆಯಾಗುವ ಸಾಧ್ಯತೆ ಇರುವ ಕಾರಣ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಗೆ ಬರುವುದಾಗಿ ಹೇಳಿದ್ದು ಅದಕ್ಕೆ ಧರ್ಮಸ್ಥಳ ಪೊಲೀಸರು ಕೂಡ ಒಪ್ಪಿಗೆ ಸೂಚಿಸಿದ್ದರು.
ನಾಳೆ ಮತ್ತೆ ವಿಚಾರಣೆಗೆ ಬರಲು ಖಾಕಿ ಬುಲಾವ್: ಮಧ್ಯಾಹ್ನ 1 ಗಂಟೆಗೆ ಬಂದಿದ್ದ ಸಮೀರ್‌ನ ವಿಚಾರಣೆಯನ್ನು ಸಂಜೆ 6 ಗಂಟೆಗೆ ವರೆಗೂ ನಡೆಸಿದ್ದಾರೆ. ಬಳಿಕ ಸಮೀರ್ ವಾಪಸ್ ಕಾರಿನಲ್ಲಿ ವಕೀಲರ ಜೊತೆ ವಾಪಸ್ ತೆರಳಿದ್ದಾನೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಇಂದು ದಾಖಲೆ ಮೂಲಕ ವಿಚಾರಣೆ ನಡೆಸಿದ್ದು. ಆ. 25ರಂದು ಸೋಮವಾರ ಮತ್ತೆ ವಿಚಾರಣೆಗೆ ಬರಲು ನೋಟಿಸ್ ನೀಡಿ ಸೂಚನೆ ಕೊಟ್ಟು ದಾಖಲೆಗಳಿಗೆ ಸಹಿ ಪಡೆದು ಕಳುಹಿಸಿದ್ದಾರೆ. AI ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ವಶಕ್ಕೆ ಪಡೆಯಲು ಬಾಕಿ ಇರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.