Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾರವಾರ: ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು- ಡಿಸಿ

ಕಾರವಾರ: ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು- ಡಿಸಿ

0

ಕಾರವಾರ: ಮಾಧ್ಯಮವು ಸಾರ್ವಜನಿಕರು ಹಾಗೂ ಸರ್ಕಾರದ ಕೊಂಡಿಯಾಗಿದೆ. ಜಿಲ್ಲೆಯಲ್ಲಿ ಮಾಧ್ಯಮಗಳು ಸಾರ್ವಜನಿಕರ ಧ್ವನಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಹಲವು ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

ಕಾರವಾರದ ಪತ್ರಿಕಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆ ವಿಸ್ತೀರ್ಣದಲ್ಲಿ ದೊಡ್ಡದಾದ್ದರಿಂದ ಅಧಿಕಾರಿಗಳಿಗೆ ತಾಲೂಕುಗಳಿಗೆ ತೆರಳಲು ಸಮಯ ಹಿಡಿಯುತ್ತದೆ. ಎಲ್ಲ ಸಾರ್ವಜನಿಕರಿಗೂ ಅಧಿಕಾರಿಗಳನ್ನು ಭೇಟಿ ಮಾಡುವುದು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಮಾಧ್ಯಮಗಳು ಸಾರ್ವಜನಿಕರ ಧ್ವನಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಸೇತುವೆಯಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಶ್ಲಾಘಿಸಿದರು.

ಪತ್ರಿಕೆಗಳನ್ನು ನಿಯಮಿತವಾಗಿ ಓದುವುದರಿಂದ ಜಿಲ್ಲೆಯ ಸ್ಥಿತಿಗತಿಗಳು ತಿಳಿಯುತ್ತವೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು ಎಂದು ಹೇಳಿದರು.

ಜಿಪಂ ಸಿಇಒ ಡಾ. ದಿಲೀಶ್ ಶಶಿ ಮಾತನಾಡಿ, ಮಾಧ್ಯಮವು ಸಾರ್ವಜನಿಕ-ಸರ್ಕಾರದ ಮಧ್ಯೆ ಸೇತುವೆಯಾಗಿದ್ದು, ಅಧಿಕಾರಿಗಳ ಕಣ್ಣು ಕಿವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು, ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಮಾಧ್ಯಮದ ಬೆಂಬಲ ಅಗತ್ಯ. ಇಲಾಖೆಗೆ ಅನೇಕ ಮಾಹಿತಿಗಳು ಮಾಧ್ಯಮಗಳ ಮೂಲಕವೇ ತಿಳಿಯುತ್ತವೆ. ಸ್ವಾತಂತ್ರ‍್ಯ ಹೋರಾಟಕ್ಕೂ ಮಾಧ್ಯಮವೇ ಉಸಿರಾಗಿತ್ತು ಎಂದು ಹೇಳಿದರು.

ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಪತ್ರಕರ್ತ ನಾಗರಾಜ ಹರಪನಹಳ್ಳಿ ಅವರಿಗೆ ಹರ್ಮನ್ ಮೋಗ್ಲಿಂಗ್ ಪ್ರಶಸ್ತಿ, ಪತ್ರಕರ್ತರಾದ ಭರತರಾಜ ಕಲ್ಲಡ್ಕ, ಎಸ್.ಎಸ್. ಸಂದೀಪ ಸಾಗರ ಹಾಗೂ ಛಾಯಾಗ್ರಾಹಕ ದಿಲೀಪ ಅವರಿಗೆ ಟ್ಯಾಗೋರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿರಸಿ ಘಟಕ ನೀಡುವ ಅಜ್ಜಿಬಳ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ದೀಪಕ ಶೆಣೈ ಹಾಗೂ ಸೌತ್ ಇಂಡಿಯಾ ಮೀಡಿಯಾ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಶೇಷಗಿರಿ ಮುಂಡಳ್ಳಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಕಾರವಾರ ನಗರಸಭೆಯ ಮಹಿಳಾ ಪೌರಕಾರ್ಮಿಕರಿಗೂ ಸನ್ಮಾನ ನೆರವೇರಿಸಲಾಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version