ಮಂಗಳೂರು: ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾವ ಗರಡಿಯಲ್ಲಿ ಬೆಳೆದಿದ್ದು?, ಅವರೇನು ಕಾಂಗ್ರೆಸ್‌ನವರಾ?, ಸೇವಾದಳದವರಾ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ – ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಅಂತ್ಯಗೊಳಿಸುವುದಕ್ಕಾಗಿಯೇ ತಿಮರೋಡಿ ಅವರನ್ನು ಗಡಿಪಾರು ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಗಿರೀಶ್ ಮಟ್ಟಣ್ಣನವರ್ ಬಿಜೆಪಿಯ ಅಧಿಕೃತ ಅಭ್ಯರ್ಥಿ. ಬಿಜೆಪಿ ಬಿ ಫಾರಂ ತೆಗೆದುಕೊಂಡಿದ್ದಾರೆ. ಇವರೆಲ್ಲಾ ಇದೇ ಗರಡಿಯಲ್ಲಿ ಬೆಳೆದವರು. ಇದು ಆರೆಸ್ಸೆಸ್ ವರ್ಸಸ್ ಆರೆಸ್ಸೆಸ್ ವಿವಾದ. ದಯವಿಟ್ಟು ಆರೆಸ್ಸೆಸ್ ಜಗಳವನ್ನು ತಂದು ಸರಕಾರಕ್ಕೆ ಹಚ್ಚಬೇಡಿ. ನಾವು ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದರು.
ಎಸ್‌ಐಟಿ ತನಿಖಾಧಿಕಾರಿಗಳ ಬಗ್ಗೆ ನಾವು ಮಾತನಾಡಲು ಆಗುವುದಿಲ್ಲ. ತನಿಖೆ ನಡೆಯುತ್ತಿದೆ. ಅಲ್ಲಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಬಿಜೆಪಿಯವರಿಗೆ ಗೊತ್ತಿದ್ದರೆ ಸಂತೋಷ. ಷಡ್ಯಂತ್ರ ಎಂದರೆ ಏನು ಎಂಬುದನ್ನು ಬಿಜೆಪಿಯವರು ಹೇಳಲಿ. ಸೌಜನ್ಯ ಪ್ರಕರಣದಲ್ಲೂ ಹೌದೆನ್ನುತ್ತಾರೆ. ಧರ್ಮಸ್ಥಳ ಚಲೋನೂ ಅವರೇ ಮಾಡುತ್ತಾರೆ. ಬಿಜೆಪಿಯವರು ಆರೆಸ್ಸೆಸ್ ಮತ್ತು ಆರೆಸ್ಸೆಸ್ ನಡುವಿನ ಗಲಾಟೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ವೇದಿಕೆ ಹತ್ತಿದಾಗ ಒಂದು, ಇಳಿದಾಗ ಒಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆಗಳ ಆರೋಪದ ಕುರಿತು ತನಿಖೆ ಮಾಡಲೆಂದು ನಾವೇ ಎಸ್‌ಐಟಿ ರಚನೆ ಮಾಡಿದ್ದು. ನಾವು ಅವರ ಪರ, ಇವರ ಪರ ಇಲ್ಲ. ನಾವು ಸತ್ಯದ ಪರ ಇದ್ದೇವೆ, ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ಮಾಡಿದ್ದು ನಾವೇ ಅಲ್ಲವೇ. ಹಿಂದಿನ ಸರಕಾರ ಇತ್ತಲ್ಲ ಅವರು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಧರ್ಮಸ್ಥಳ ಚಲೋ ಮಾಡಿದ್ದು ಧರ್ಮಾಧಿಕಾರಿಯವರ ಮರ್ಯಾದೆ ಉಳಿಸಲೆಂದು ತಾನೇ? ವೇದಿಕೆ ಹತ್ತಿ ಧರ್ಮಾಧಿಕಾರಿ ಪರ ವಹಿಸಿದ್ದರು. ವೇದಿಕೆ ಇಳಿದು ಸೌಜನ್ಯ ಮನೆಗೆ ಹೋಗಿದ್ದರಲ್ಲ. ಆಗ ಯಾರ ಪರವಾಗಿ ಹೋಗಿದ್ದು? ಅಲ್ಲಿ ಸೌಜನ್ಯ ಸಂಬಂಧಿಕರು ಯಾರ ಹೆಸರು ಉಲ್ಲೇಖಿಸಿದ್ದು? ಅದೇ ಬಿಜೆಪಿ ನಾಯಕರು ಮಾಧ್ಯಮ ಎದುರು ಬಂದು ಸೌಜನ್ಯ ಹೋರಾಟದಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಹೋಗಬೇಕಾದರೆ ಅವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಎನ್ನುತ್ತಾರೆ.
ಈ ರೀತಿಯಾಗಿ ವೇದಿಕೆ ಇಳಿದಾಗ ವಿರುದ್ಧ, ಹತ್ತಿದಾಗ ಧರ್ಮಾಧಿಕಾರಿ ಪರ ಏನು ನಾಟಕ ಮಾಡುತ್ತಿದ್ದಾರೆ ಬಿಜೆಪಿಯವರು. ಎರಡೆರಡು ದೋಣಿಯಲ್ಲಿ ಕಾಲಿಟ್ಟು ಹೋಗುವ ಬಿಜೆಪಿಯವರನ್ನು ಬಿಟ್ಟು ನಮ್ಮಲ್ಲಿ ಪ್ರಶ್ನೆ ಕೇಳಿದರೇನು ಪ್ರಯೋಜನ ಎಂದವರು ತರಾಟೆಗೈದರು.
ಯಾರನ್ನಾದರೂ ಗಡಿಪಾರು ಮಾಡಬೇಕೆಂದರೆ ಸರಕಾರದ ಮನಸ್ಸಿಗೆ ಬಂದಂತೆ ಮಾಡಲು ಆಗುವುದಿಲ್ಲ. ಕೆಲವೊಂದು ಮಾನದಂಡಗಳಿರುತ್ತವೆ. ಕೋರ್ಟ್‌ಗೆ ಹೋಗಿ, ಅಲ್ಲಿಯೂ ಚರ್ಚೆ ಮಾಡಲಾಗುತ್ತದೆ. ಕಾರಣವಿಲ್ಲದೆ ಮಾಡಲು ಆಗುವುದಿಲ್ಲ ಎಂದರು.
ಜಾತಿ ಸಮೀಕ್ಷೆ ಮೂಲಕ ಕಾಂಗ್ರೆಸನ್ನು ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆಂಬ ಬಿಜೆಪಿ ನಾಯಕರ ಆರೋಪದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದ ಬಗ್ಗೆ ಬಿಜೆಪಿಗೇಕೆ ಚಿಂತೆ. ನಮ್ಮ ಪಕ್ಷ ಉಳಿಸುತ್ತೇವೆಯೋ, ಬೆಳೆಸುತ್ತೇವೆಯೋ ಎಂಬ ಬಗ್ಗೆ ಬಿಜೆಪಿಗೇಕೆ ಆಸಕ್ತಿ. ಅವರಿಗೆ ಕಾಂಗ್ರೆಸ್ ನಾಶವಾಗುವುದು ಅವರಿಗೆ ಬೇಕಿದೆ. ಮೊದಲು ಕರ್ನಾಟಕದಲ್ಲಿ ಅವರು ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲಿ ಎಂದರು.
ಈಗಾಗಲೇ ಯತ್ನಾಳ್ ಅವರಿಗೆ ಗೇಟ್‌ಪಾಸ್ ನೀಡಲಾಗಿದ್ದು, ಇವರ ವಿರುದ್ಧ ಇನ್ನೂ ಎಂಟು ಹತ್ತು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಮಾಡುವುದು ಬಿಟ್ಟು ಅವರ ಪಕ್ಷದ ಬಗ್ಗೆ ಬಿಜೆಪಿ ನಾಯಕರು ಚಿಂತೆ ಮಾಡಲಿ. ಬಿಜೆಪಿಯ ಪ್ರಸಕ್ತ ನಾಯಕರಾದ ವಿಜಯೇಂದ್ರ ಮತ್ತು ಅಶೋಕ್ ಬಗ್ಗೆ ಯತ್ನಾಳ್ ಅವರ ಅಭಿಪ್ರಾಯವೇನು ಎಂಬುದನ್ನು ಅವರು ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.