Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ವೈಭವದ ಮಂಗಳೂರು ದಸರಾಕ್ಕೆ ಚಾಲನೆ

ವೈಭವದ ಮಂಗಳೂರು ದಸರಾಕ್ಕೆ ಚಾಲನೆ

0

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ಶಾರದಾ ಮಾತೆ, ಮಹಾಗಣಪತಿ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಮಂಗಳೂರು ರಾಮಕೃಷ್ಣ ಮಿಶನ್ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಚಾಲನೆ ನೀಡಿದರು.

ಭವ್ಯ ಕಲಾಮಂಟಪದಲ್ಲಿ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಸಹಿತ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿ, ಸಿದ್ಧಿಧಾತ್ರಿಯರ ಮೂರ್ತಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಅಪಾರ ಭಕ್ತರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಬಾರಿ ತದಿಗೆ ಉಪರಿ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ದಸರಾ ಪೂಜೆ ನಡೆಯಲಿದೆ. ಭವ್ಯ ಮೂರ್ತಿಗಳಿಗೆ ಅಕ್ಟೋಬರ್ 2ರಂದು ಸಂಜೆ ವಿಸರ್ಜನಾ ಪೂಜೆಯ ನಂತರ, ನಗರದಾದ್ಯಂತ ಮೆರವಣಿಗೆ ನಡೆಯಲಿದೆ. ಮರುದಿನ ಬೆಳಗ್ಗೆ ಮೂರ್ತಿಗಳನ್ನು ದೇವಸ್ಥಾನದ ಕಲ್ಯಾಣಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್. ಸೋಮಸುಂದರಂ, ಉರ್ಮಿಳಾರಮೇಶ್, ಬಿ. ಮಾಧವ ಸುವರ್ಣ, ಸದಸ್ಯರಾದ ಹೆಚ್. ಎಸ್. ಸಾಯಿರಾಂ, ಕ್ಷೇತ್ರಾಭಿವೃದ್ಧಿ ಸಮಿತಿಯ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ. ಬಿ. ಸುವರ್ಣ, ಲೀಲಾಕ್ಷ ಕರ್ಕೇರಾ ಮೊದಲಾದವರಿದ್ದರು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ, ಮಂಗಳೂರು ದಸರಾದ ಧಾರ್ಮಿಕ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆದಿದೆ. ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಪ್ರತಿಷ್ಠಾಪನೆಗೆ ಜನಸಾಗರ ಹರಿದುಬಂದಿದೆ. ಹತ್ತು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version