Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿದಾರನ ತಪ್ಪೊಪ್ಪಿಗೆ ಹೇಳಿಕೆ ದಾಖಲು, ತನಿಖೆಗೆ ಹೊಸ ದಿಕ್ಕು!

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿದಾರನ ತಪ್ಪೊಪ್ಪಿಗೆ ಹೇಳಿಕೆ ದಾಖಲು, ತನಿಖೆಗೆ ಹೊಸ ದಿಕ್ಕು!

0

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದ್ದ ವಿವಾದಾತ್ಮಕ “ಬುರುಡೆ ಪ್ರಕರಣ” ಇದೀಗ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ ಮಂಗಳವಾರ (ಸೆಪ್ಟೆಂಬರ್ 23) ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಚಿನ್ನಯ್ಯ 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬುರುಡೆ ಪ್ರಕರಣದ ಬಗ್ಗೆ ಹೇಳಿಕೆ ನೀಡಲಿದ್ದಾನೆ

ಶಿವಮೊಗ್ಗ ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಕರೆತರಲಾದ ಚಿನ್ನಯ್ಯ, ನ್ಯಾಯಾಧೀಶರ ಮುಂದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 183ರ ಅಡಿಯಲ್ಲಿ ಸ್ವಯಂಪ್ರೇರಿತ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಹೇಳಿಕೆಯು ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

ಪ್ರಕರಣದ ಆರಂಭದಲ್ಲಿ, ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿ, ತಾನು ಮೃತದೇಹವೊಂದನ್ನು ಹೊರತೆಗೆದಿದ್ದು, ಅದಕ್ಕೆ ಸಂಬಂಧಿಸಿದ ತಲೆಬುರುಡೆಯನ್ನು ಒಪ್ಪಿಸಿದ್ದಾಗಿ ಹೇಳಿಕೊಂಡಿದ್ದನು. ಇದು ತನಿಖಾಧಿಕಾರಿಗಳಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದರೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿದಾಗ, ಆತ ತಲೆಬುರುಡೆ ಸಿಕ್ಕಿದ ಜಾಗವನ್ನು ತೋರಿಸಲು ಹಿಂದೇಟು ಹಾಕಿದ್ದನು.

ನಂತರ, ತಾನು ತಲೆಬುರುಡೆಯನ್ನು ಹೊರತೆಗೆದಿಲ್ಲ ಎಂದು ತನ್ನ ಹಿಂದಿನ ಹೇಳಿಕೆಯನ್ನು ಬದಲಾಯಿಸಿದ್ದನು. ಈ ಗೊಂದಲದ ಮತ್ತು ಪರಸ್ಪರ ವಿರೋಧಾತ್ಮಕ ಹೇಳಿಕೆಗಳ ಕಾರಣ ಎಸ್‌ಐಟಿ ಆಗಸ್ಟ್ 23ರಂದು ಚಿನ್ನಯ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸೆಪ್ಟೆಂಬರ್ 18ರಂದು ಕೂಡ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತಾದರೂ, ಅಂದು ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಇಂದು ದಾಖಲಾಗಿರುವ ಚಿನ್ನಯ್ಯನ ತಪ್ಪೊಪ್ಪಿಗೆ ಹೇಳಿಕೆಯು ಪ್ರಕರಣದ ಸತ್ಯಾಂಶವನ್ನು ಹೊರತರಲು ಅತ್ಯಂತ ನಿರ್ಣಾಯಕವಾಗಿದೆ. ಈ ಹೇಳಿಕೆಯು ಮೃತದೇಹಗಳ ಅಸಲಿಯತ್ತು, ಅವುಗಳ ಮೂಲ, ಮತ್ತು ಈ ಸಂಪೂರ್ಣ ಪ್ರಕರಣದಲ್ಲಿ ಚಿನ್ನಯ್ಯನ ಪಾತ್ರದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.

ಈ ಹಿಂದೆ ತಲೆಬುರುಡೆ ಸಿಕ್ಕಿದ ಜಾಗ, ಅದರ ವೈಜ್ಞಾನಿಕ ವಿಶ್ಲೇಷಣೆ ಮತ್ತು ಇತರ ಸಾಕ್ಷ್ಯಗಳೊಂದಿಗೆ ಈ ಹೇಳಿಕೆಯನ್ನು ಹೋಲಿಸಿ ನೋಡಿದಾಗ ಪ್ರಕರಣದ ನಿಜಾಂಶ ಹೊರಬರಬಹುದು. ನ್ಯಾಯಾಲಯದ ಈ ಪ್ರಕ್ರಿಯೆಗಳು ಪ್ರಕರಣಕ್ಕೆ ಸಂಬಂಧಿಸಿದ ಹಲವು ಅನುಮಾನಗಳನ್ನು ನಿವಾರಿಸಿ, ಅಂತಿಮವಾಗಿ ನ್ಯಾಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version