ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಪುತ್ತೂರು ಎಸಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತಿಮರೋಡಿಗೆ ಗಡಿಪಾರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಬೆಳ್ತಂಗಡಿಯ ಮನೆಯಲ್ಲಿ ತಿಮರೋಡಿ ಇಲ್ಲ. ಈ ಹಿನ್ನೆಲೆಯಲ್ಲಿ ಖುದ್ದು ನೋಟಿಸ್ ತಲುಪಿಸಲು ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಪೊಲೀಸರ ತಂಡ ತೆರಳಿದೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನ ಭೀತಿಯಿಂದ ಸದ್ಯ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿರುವ ಇವರು, ಈಗ ಮಂಗಳೂರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸೆ. 27ಕ್ಕೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
2025ರ ಸೆ. 18ರಿಂದ ಮುಂದಿನ ವರ್ಷದ ಸೆ. 17ರ ತನಕದ ಅವಧಿಗೆ ಪುತ್ತೂರು ಎಸಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ. ಈ ಆದೇಶ ಪಾಲನೆಯಾಗದಿದ್ದರೆ ಕೂಡಲೇ ಇವರನ್ನು ಬಂಧಿಸಿ, ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲು ಸೂಚಿಸಲಾಗಿದೆ.
ತಿಮರೋಡಿ ರಾಯಚೂರಿಗೆ ಬೇಡ: ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿರುವ ಬೆನ್ನಲ್ಲೇ ರಾಯಚೂರಿನಲ್ಲಿ ವಿರೋಧ ವ್ಯಕ್ತವಾಗಿದೆ. ಅಲ್ಲಿನ ದಲಿತ ಸೇನೆ ಮತ್ತು ಸಮಾನಮನಸ್ಕರ ವೇದಿಕೆ ಪ್ರತಿಭಟನೆ ನಡೆಸಿ ರಾಯಚೂರು ಜಿಲ್ಲೆಯಲ್ಲಿ ಗೂಂಡಾಗಳು ಬೇಡ, ಯಾವುದಾದರೂ ಕಾಡಿಗೆ ಇವರನ್ನು ಕಳಿಸಿ ಎಂದು ಆಕ್ರೋಶ ವ್ಯಕ್ತಮಾಡಿದ್ದಾರೆ.
ರಾಯಚೂರೇ ಏಕೆ: ಪುತ್ತೂರು ಎಸಿ ತಿಮರೋಡಿ ಅವರನ್ನು ರಾಯಚೂರಿಗೆ ಗಡಿಪಾರು ಮಾಡಿರುವುದು ಕುತೂಹಲ ಕೆರಳಿಸಿದೆ. ತವರು ಜಿಲ್ಲೆಯಲ್ಲಿ ನಡೆಸಿರುವ ಕೃತ್ಯ ಮುಂದುವರೆಸಲು ಹೊಸ ಜಾಗದಲ್ಲಿ ಅವಕಾಶವಿರಬಾರದು, ಈ ಪ್ರದೇಶ ಸಾಕಷ್ಟು ದೂರವಿರಬೇಕು ಎಂಬಿತ್ಯಾದಿ ಕಾರಣಗಳನ್ನು ಇದಕ್ಕೆ ನೀಡಲಾಗುತ್ತದೆ. ಬೆಳ್ತಂಗಡಿಯಿಂದ ರಾಯಚೂರು 532 ಕಿ.ಮೀ. ದೂರವಿರುವುದರಿಂದ ಒಂದೇ ದಿನದಲ್ಲಿ ಇಲ್ಲಿಗೆ ಬಂದು ಹೋಗಲು ಅಸಾಧ್ಯವಾದುದರಿಂದ ರಾಯಚೂರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಅಸಂವಿಧಾನಿಕ ಪದ: ಸಾರ್ವಜನಿಕ ಸಭೆಗಳಲ್ಲಿ ತಿಮರೋಡಿ ರಾಜಕಾರಣಿಗಳ ಬಗ್ಗೆ ಹಲವು ಬಾರಿ ಅಸಂವಿಧಾನಿಕ ಪದ ಬಳಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಆಡಳಿತವನ್ನೂ ನಿಂದಿಸಿದ್ದಾರೆ. ಇವರ ವಿರುದ್ಧ ಹಲವು ಠಾಣೆಗಳಲ್ಲಿ 32 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ರಮ ವಹಿಸಲು ಸರ್ಕಾರ ದ.ಕ. ಎಸ್ಪಿಗೆ ಸೂಚನೆ ನೀಡಿತ್ತು.
ಮತ್ತೊಂದು ವಿಡಿಯೋ ರಿಲೀಸ್: ತಿಮರೋಡಿ ಮತ್ತು ಬುರುಡೆ ಚಿನ್ನಯ್ಯ ನಡುವಿನ ಸಂಭಾಷಣೆಯ 15ನೇ ವಿಡಿಯೋ ತುಣುಕು ಬಿಡುಗಡೆಯಾಗಿದೆ. ಚೆನ್ನೈ ಸ್ವಾಮೀಜಿ ಕನ್ಯಾಡಿಯಲ್ಲಿ ಜಾಗ ಖರೀದಿಸಿ ಬಳಿಕ ಮಾರಾಟ ಮಾಡಿದ್ದು, ಅಲ್ಲಿ ಕೂಡ ಸಾಕಷ್ಟು ಶವ ಹೂಳಿರುವ ಕತೆಯನ್ನು ಚಿನ್ನಯ್ಯ ಇಲ್ಲಿ ವಿವರಿಸಿದ್ದಾನೆ. ಅಲ್ಲದೇ ಆ್ಯಸಿಡ್ ಹಾಕಿ ಮಹಿಳೆಯನ್ನು ಸುಟ್ಟಿದ್ದಾರೆ. ಅನಾಥ ಶವಗಳನ್ನು ಇಲ್ಲಿ ಹೂಳಿದ್ದೇವೆ ಎಂಬಿತ್ಯಾದಿ ವಿವರಗಳನ್ನೂ ಈತ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.