ಬೆಂಗಳೂರು: ಕರ್ನಾಟಕ ಹೈಕೋರ್ಟ್ ಗುರುವಾರ (ಸೆಪ್ಟೆಂಬರ್ 25) ಹಿಂದುಳಿದ ವರ್ಗಗಳ ಶಾಶ್ವತ ಆಯೋಗ (Permanent Backward Classes Commission) ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census) ಕುರಿತಂತೆ ಮಹತ್ವದ ಆದೇಶ ನೀಡಿದೆ. ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್, ಕೆಲವು ಷರತ್ತುಗಳನ್ನು ವಿಧಿಸಿ ಸರ್ಕಾರಕ್ಕೆ ಸಮೀಕ್ಷೆ ಮುಂದುವರಿಸಲು ಅವಕಾಶ ನೀಡಿದೆ.
ಸಮೀಕ್ಷೆಗೆ ತಡೆ ಇಲ್ಲ: ಅರ್ಜಿದಾರರ ಮನವಿಯನ್ನು ತಳ್ಳಿಹಾಕಿದ ಹೈಕೋರ್ಟ್, ಸರ್ಕಾರ ಕೈಗೊಂಡಿರುವ ಸಮೀಕ್ಷಾ ಪ್ರಕ್ರಿಯೆಗೆ ಅಡ್ಡಿಯಿಲ್ಲವೆಂದು ಸ್ಪಷ್ಟಪಡಿಸಿದೆ. ಸಮೀಕ್ಷಾ ಕಾರ್ಯ ಮುಂದುವರಿಯಬಹುದಾದರೂ, ಡೇಟಾ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯೋಗದ ಬಗ್ಗೆ ವೈಜ್ಞಾನಿಕತೆ, ಗೌಪ್ಯತೆ ಮತ್ತು ನಿಷ್ಠೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಇನ್ನುಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ.