ಮಂಗಳೂರು: ನಗರದ ಸಂಘನಿಕೇತನದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಂಘನಿಕೇತನದಲ್ಲಿ ನಡೆಯುತ್ತಿರುವ 78ನೇ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದ ನಿಯೋಗ ಶನಿವಾರ ಭೇಟಿ ನೀಡಿ ಹೂ, ಹಣ್ಣುಗಳನ್ನು ಸಮರ್ಪಿಸಿತು.
ನಿಯೋಗವು ಕಾಣಿಕೆ ರೂಪದಲ್ಲಿ ತಂದ ಹೂ, ಹಣ್ಣು ಹಂಪಲನ್ನು ಗಣಪತಿ ದೇವರಿಗೆ ಸಮರ್ಪಿಸಿತು. ಭರತನಾಟ್ಯದಲ್ಲಿ ಇತ್ತೀಚೆಗೆ ದಾಖಲೆ ಮಾಡಿದ ರೆಮೊನಾ ಇವೆಟ್ ಪಿರೇರಾ ಅವರನ್ನು ಸಮಿತಿಯ ವತಿಯಿಂದ ಈ ವೇಳೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಹಾಗೂ ಸಂಚಾಲಕ -ಕ್ಲಿನ್ ಮೊಂತೆರೊ, ಒಂದು ರಾಷ್ಟ್ರ ಒಂದು ಕುಟುಂಬದಂತೆ ಒಟ್ಟಾದಾಗ ದಾಸ್ಯದಿಂದ ಬಿಡುಗಡೆ ಸಾಧ್ಯ ಎಂದು ಬಾಲಗಂಗಾಧರ ತಿಲಕ್ ಅವರು ಹೇಳಿದ್ದರು. ಸ್ವಾತಂತ್ರ್ಯ ದೊರೆತು 79 ವರ್ಷಗಳಾಗಿವೆ. ನಮ್ಮ ಐಕ್ಯತೆ ಉಳಿಯಬೇಕಾದರೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು.
ಧರ್ಮದ ಆಚರಣೆ ಬೇರೆ ಇದ್ದರೂ ರಾಷ್ಟ್ರೀಯತೆಯಲ್ಲಿ ನಾವೆಲ್ಲರೂ ಒಂದು ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶಯ ಕೂಡ ರಾಷ್ಟ್ರೀಯ ಐಕ್ಯತೆ. ಹಾಗಾಗಿ ಯಾವುದೇ ಪ್ರತಿ-ಲಾಪೇಕ್ಷೆಯಿಲ್ಲದೆ ಭಕ್ತಿ, ಶ್ರದ್ಧೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಈ ಭೇಟಿ ಹಮ್ಮಿಕೊಂಡಿದ್ದೇವೆ. ನಮ್ಮ ನಿಯೋಗದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಇದ್ದಾರೆ ಎಂದು ಹೇಳಿದರು.
ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನ ಸಂಘನಿಕೇತನದ ಗಣೇಶೋತ್ಸವಕ್ಕೆ ಭೇಟಿ ನೀಡಿ ರಾಷ್ಟ್ರೀಯ ಐಕ್ಯತೆ ಮತ್ತು ಸಾಮಾಜಿಕ ಸಹಬಾಳ್ವೆಯ ಸಂದೇಶ ನೀಡಲಾಗುತ್ತಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಆತ್ಮೀಯ ಸ್ವಾಗತ ದೊರೆತಿದೆ. ಇಲ್ಲಿಗೆ ಆಗಮಿಸಲು ತುಂಬಾ ಸಂತೋಷವಾಗುತ್ತದೆ ಎಂದು ನಿಯೋಗದಲ್ಲಿದ್ದ ವಕೀಲರಾದ ಲ್ಯಾನಿ ಮರೀಜಾ ಪಿಂಟೊ ಹೇಳಿದರು.
ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್ ಪ್ರಭು ಮಾತನಾಡಿ, ಸಮಾಜದ ಕ್ರೈಸ್ತ ಬಂಧುಗಳು ಪ್ರತೀ ವರ್ಷವೂ ಸಂಘನಿಕೇತನ ಗಣೇಶೋತ್ಸವಕ್ಕೆ ಭೇಟಿ ನೀಡಿ ಸಾಮರಸ್ಯದ ಸಂದೇಶ ನೀಡುತ್ತಿದ್ದಾರೆ. ಜಾತಿ, ಮತ ಮೀರಿ ಸಮಷ್ಠಿಯ ಚಿಂತನೆಯಿಂದ ಕೆಲಸ ಮಾಡಿದಾಗ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯೂ ಸಾಧ್ಯ. ತಿಲಕರ ಚಿಂತನೆ, ಪ್ರೇರಣೆಯಂತೆ ರಾಷ್ಟ್ರೀಯ ಹಿತಾಸಕ್ತಿಗಾಗಿ ಸಮಷ್ಠಿ ಚಿಂತನೆಯಿಂದ ಇದು ನಡೆಯುತ್ತಿದೆ. ಗಣಪತಿಯ ಅನುಗ್ರಹದಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಯಾಗಿ ದೇಶದ ಅಭಿವೃದ್ಧಿಯಾಗಲಿ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಮುಖರಾದ ಸತೀಶ್ ರಾವ್, ಗಜಾನನ ಪೈ, ಜಿ.ಸುರೇಶ್ ವಿ.ಕಾಮತ್, ಯೋಗೀಶ್ ಆಚಾರ್, ವಿನೋದ್ ಶೆಣೈ, ಅಭಿಷೇಕ್ ಭಂಡಾರಿ, ಭರತ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಡಾ. ಜೆಸ್ಸಿ ಮರಿಯಾ, ಡಾ. ಎಲ್ವಿಸ್ ರೋಡ್ರಿಗಸ್, ಡಾ. ತೆರೆಸಾ ಲಿಡಿಯಾ ಮೆಂಡೋನ್ಸಾ, ಪ್ರೊ. ಸಂಧ್ಯಾ ಡಿಸೋಜ, ರೇಷ್ಮಾ ಡಿಸೋಜ, ಪ್ರವೀಣ್ ತಾವ್ರೊ, ಮ್ಯಾಕ್ಸಿಂ ಪಿರೇರಾ, ಅರುಣ್‌ರಾಜ್ ರೋಡ್ರಿಗಸ್, ವಿನೋದ್ ಪಿಂಟೊ, ನವೀನ್ -ರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.