Home News Siddaramaiah: 5 ವರ್ಷ ನಾನೇ ಮುಖ್ಯಮಂತ್ರಿ…ಸಿದ್ದರಾಮಯ್ಯ ಘೋಷಣೆ!

Siddaramaiah: 5 ವರ್ಷ ನಾನೇ ಮುಖ್ಯಮಂತ್ರಿ…ಸಿದ್ದರಾಮಯ್ಯ ಘೋಷಣೆ!

ಬೆಂಗಳೂರು: “ಐದೂ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ”… ಬೆಂಗಳೂರಿನಲ್ಲಿ ಘಂಟಾಘೋಷವಾಗಿ ಇದೇ ಮಾತನ್ನು ಹಲವು ಬಾರಿ ಹೇಳಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಸಡಿಲಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ದೆಹಲಿಯ ಪತ್ರಿಕಾಗೋಷ್ಠಿ.

ಗುರು ಪೂರ್ಣಿಮೆಯ ದಿವಸವಾದ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ “ಸಚಿವ ಸಂಪುಟ ಪುನರ್ ರಚನೆ ಇಲ್ಲ, 2028ರ ಚುನಾವಣೆಗೆ ನನ್ನದೇ ನಾಯಕತ್ವದಲ್ಲಿ ಹೋಗಲಿದ್ದೇವೆ” ಎಂದು ಹೇಳುವ ಮೂಲಕ ರಾಜಕೀಯ ಹೇಳಿಕೆಗಳಿಗೆ ಫುಲ್‌ ಸ್ಟಾಪ್‌ ಇಟ್ಟರು.

ಬುಧವಾರದಿಂದ ದೆಹಲಿಯಲ್ಲಿರುವ ಸಿದ್ದರಾಮಯ್ಯ ಈಗಾಗಲೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, “ಹೈಕಮಾಂಡ್‌ ನಮ್ಮ ತಿರ್ಮಾನಕ್ಕೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ. ನಾವು ಇದಕ್ಕೆ ಒಪ್ಪಿಕೊಂಡಿದ್ದೇವೆ. ಅಧಿಕಾರ ಹಂಚಿಕೆಯ ಬಗ್ಗೆ ಯಾವ ಚರ್ಚೆಯೂ ಕೂಡ ಆಗಿಲ್ಲ. 2028ರಲ್ಲೂ ನಾನೇ ಪಕ್ಷವನ್ನು ಮುನ್ನಡೆಸುತ್ತೇನೆ” ಎಂದು ಹೇಳಿದರು.

“ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ನಾನು ಅದಕ್ಕೆ ಬದ್ಧನಾಗಿದ್ದೇನೆ. ನಾನಾಗಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಆಗಲಿ ಹೈಕಮಾಂಡ್ ಹೇಳುವುದನ್ನು ಪಾಲನೆ ಮಾಡಬೇಕು. ಡಿ.ಕೆ. ಶಿವಕುಮಾರ್ ಕೂಡ ಸಿಎಂ ಬದಲಾಗಲಿ ಅಂತ ಹೇಳಿಕೆ ಕೊಟ್ಟಿಲ್ಲ. ಊಹೆ ಮಾಡುತ್ತಿರುವುದು ಮಾಧ್ಯಮಗಳು. ಪಕ್ಷದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸೆಪ್ಟೆಂಬರ್ ಕ್ರಾಂತಿ ಎಂದರೆ ಏನು?: “ಕ್ರಾಂತಿ ಅಂದರೆ ಬದಲಾವಣೆಯೇ?. ಬದಲಾವಣೆ ಬಗ್ಗೆ ಖರ್ಗೆ, ರಾಹುಲ್ ಗಾಂಧಿ ವೇಣುಗೋಪಾಲ್‌ ಅವರು ಹೇಳಬೇಕು. ಸುರ್ಜೆವಾಲ ಸ್ಪಷ್ಟವಾಗಿ ಹೇಳಿದ್ದಾರೆ. ಸುಖಾಸುಮ್ಮನೆ ಉಹಾಪೋಹಗಳು ಹರಿದಾಡುತ್ತಿವೆ” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಶಾಸಕರ ಚರ್ಚೆಗಳಿಗೆ ತೆರೆ ಎಳೆದರು.

“ಸಿಎಂ ಕುರ್ಚಿ ಖಾಲಿ ಇಲ್ಲದಿದ್ದಾಗ ಆ ಕುರಿತು ಯಾಕೆ ಚರ್ಚೆ ಮಾಡುತ್ತಿದ್ದೀರಿ?. ಕೆಲವು ಡಿ. ಕೆ. ಶಿವಕುಮಾರ್ ಬೆಂಬಲಿಗರು ಅಭಿಮಾನದಿಂದ ಹೇಳುತ್ತಾರೆ. ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರೂ ನಾನು ಮತ್ತು ಡಿಕೆಶಿ ಅದಕ್ಕೆ ಬದ್ಧರಾಗಿದ್ದೇವೆ. ಸರ್ಕಾರ ಎರಡೂವರೆ ವರ್ಷ ಪೂರೈಸಿದ್ದಕ್ಕೆ ಸ್ವಾಭಾವಿಕವಾಗಿ ಚರ್ಚೆ ನಡೆದಿದೆ” ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ದೆಹಲಿ ನಾಯಕರ ಭೇಟಿ ಸಿದ್ದರಾಮಯ್ಯ ಬಣದ ಪರವೋ? ಅಥವಾ ಡಿಕೆಶಿ ಬಣದ ಪರವೋ? ಎನ್ನುವುದಂತು ಇಲ್ಲಿನ ಅಭಿಮಾನಿಗಳಿಗೆ ತೋಚದಂತಾಗಿದೆ.

Exit mobile version