ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೆಟ್ರೋ ನಿರಂತರವಾಗಿ ವಿಸ್ತರಿಸುತ್ತಿದೆ. ಇದೀಗ 3ನೇ ಹಂತದ ಕೆಂಪು ಮಾರ್ಗ (ರೆಡ್ ಲೈನ್) ನಿರ್ಮಾಣ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ಇದು ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಹೆಬ್ಬಾಳದಿಂದ ಸರ್ಜಾಪುರದವರೆಗೆ ಸುಮಾರು 36.59 ಕಿಲೋಮೀಟರ್ ದೂರದ ಈ ಮಾರ್ಗವು ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.
ಬಿಎಂಆರ್‌ಸಿಎಲ್ ಈ ಕೆಂಪು ಮಾರ್ಗದ ಭೂತಾಂತ್ರಿಕ ಅಧ್ಯಯನಕ್ಕಾಗಿ 6.86 ಕೋಟಿ ರೂಪಾಯಿಗಳ ಬೃಹತ್ ಟೆಂಡರ್ ಕರೆದಿದೆ. ಇದು ಯೋಜನೆಯ ಮೊದಲ ಹಂತವಾಗಿದ್ದು, ಮಣ್ಣು ಮತ್ತು ಕಲ್ಲುಗಳ ಭೌತಿಕ ಗುಣಲಕ್ಷಣಗಳನ್ನು ಪರೀಕ್ಷಿಸಿ, ಸುರಂಗಗಳು ಮತ್ತು ಕಂಬಗಳ ಅಡಿಪಾಯಕ್ಕೆ ಸೂಕ್ತವಾದ ವಿನ್ಯಾಸಗಳನ್ನು ನಿರ್ಧರಿಸಲು ಸಹಕಾರಿಯಾಗಿದೆ. ಅಂದಾಜು 28,405 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು 2031ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ಕಿಲೋಮೀಟರ್‌ಗೆ ಸುಮಾರು 776.3 ಕೋಟಿ ರೂಪಾಯಿ ವೆಚ್ಚ ತಗುಲುವ ನಿರೀಕ್ಷೆಯಿದೆ.
ಕೆಂಪು ಮಾರ್ಗ ಹಾದುಹೋಗುವ ಪ್ರಮುಖ ಸ್ಥಳಗಳು: ಈ ಕೆಂಪು ಮಾರ್ಗವು ಒಟ್ಟು 28 ನಿಲ್ದಾಣಗಳನ್ನು ಹೊಂದಿದ್ದು, ಸರ್ಜಾಪುರ, ಸೊಮಾಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಸೋಲಿಕುಂಟೆ, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕೊರ್ಮೆಲಾರಂ, ದೊಡ್ಡಕನ್ನಳ್ಳಿ, ಕೈಕೊಂಡ್ರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಸಿಪಿಡಬ್ಲ್ಯೂಡಿ ಕ್ವಾಟ್ರಸ್, ಸೆಂಟ್‌ಜಾನ್ಸ್ ಆಸ್ಪತ್ರೆ, ಸುದ್ದುಗುಂಟನಪಾಳ್ಯ, ಡೈರಿ ಸರ್ಕಲ್, ನಿಮ್ಹಾನ್ಸ್, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಕೆಆರ್ ಸರ್ಕಲ್, ಚಾಲುಕ್ಯ ಸರ್ಕಲ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ವೆಟರ್ನರಿ ಕಾಲೇಜ್, ಗಂಗಾ ನಗರ ಮತ್ತು ಹೆಬ್ಬಾಳದಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಮಾರ್ಗದ ವಿಶಿಷ್ಟತೆಗಳು: ಕೆಂಪು ಮಾರ್ಗವು ಭೂಗತ ಮತ್ತು ಎತ್ತರಿಸಿದ ನಿಲ್ದಾಣಗಳ ಮಿಶ್ರಣವನ್ನು ಹೊಂದಿದ್ದು, ನಾಲ್ಕು ಹಂತಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ.
- ಸರ್ಜಾಪುರದಿಂದ ಕಾರ್ಮೆಲಾರಾಂ: 9.8 ಕಿ.ಮೀ ಎತ್ತರಿಸಿದ ಮಾರ್ಗ.
- ಕಾರ್ಮೆಲಾರಾಂನಿಂದ ಕೊರಮಂಗಲ 3ನೇ ಬ್ಲಾಕ್: 9.2 ಕಿ.ಮೀ ಎತ್ತರಿಸಿದ ಮಾರ್ಗ.
- ಕೊರಮಂಗಲ 2ನೇ ಬ್ಲಾಕ್‌ನಿಂದ ಕೆಆರ್ ಸರ್ಕಲ್‌ವರೆಗೆ: 7.6 ಕಿ.ಮೀ ಭೂಗತ ಮಾರ್ಗ.
- ಕೆ.ಆರ್. ಸರ್ಕಲ್‌ನಿಂದ ಹೆಬ್ಬಾಳದವರೆಗೆ: 8.8 ಕಿ.ಮೀ ಭೂಗತ ಮಾರ್ಗ.
ಮುಂದಿರುವ ಸವಾಲುಗಳು: ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದ್ದರೂ, ಕೇಂದ್ರ ಸರ್ಕಾರದ ಅನುಮೋದನೆ ಇನ್ನೂ ಬಾಕಿ ಇದೆ. ಯೋಜನೆಯ ವೆಚ್ಚ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದ್ದು, ಬಿಎಂಆರ್‌ಸಿಎಲ್ ಹೊಸ ಪರಿಷ್ಕೃತ ವೆಚ್ಚದ ವರದಿಯನ್ನು ಸಲ್ಲಿಸಿದೆ. ಕೇಂದ್ರದ ಒಪ್ಪಿಗೆ ದೊರೆತ ನಂತರವೇ ಯೋಜನಾ ಕಾರ್ಯಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಈ ಯೋಜನೆಯು ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.