Home ನಮ್ಮ ಜಿಲ್ಲೆ ಬೆಂಗಳೂರು ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು

ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು

0

ಬೆಂಗಳೂರು: 2005ಕ್ಕೂ ಪೂರ್ವ ಅರಣ್ಯ ಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಜಿ.ಎಂ.ಶೆಟ್ಟಿ, ಪಿ.ಟಿ.ನಾಯ್ಕ,,ಗಣೇಶ ನಾಯ್ಕ ನೇತೃತ್ವದ ಹೋರಾಟ ಸಮಿತಿಯ ನಿಯೋಗವು ಇಂದು ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಅರಣ್ಯಹಕ್ಕು ಅರ್ಜಿಗಳನ್ನು ಸಾರಾ ಸಗಟು ತಿರಸ್ಕರಿಸಿದ ಪರಿಣಾಮದಿಂದ ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುವುದು. ಅರ್ಹರು ಭೂಮಿ ಹಕ್ಕಿನಿಂದ ವಂಚಿತರಾಗದಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ಅರಣ್ಯ ಭೂಮಿಯಲ್ಲಿನ ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಮರುಸಮೀಕ್ಷೆ ನಡೆಸುವುದು ಸೇರಿದಂತೆ, ಅರಣ್ಯ ಹಕ್ಕುಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಿಂದ ಜಿಲ್ಲೆಯ ಜನರಿಗೆ ಭೂಮಿಯ ಹಕ್ಕು ಕೊಡಿಸಬೇಕೆಂದು ನಿಯೋಗ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿತು.

ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸರಕಾರದ ಮುಂದೆ ವಿವಿಧ ರಚನಾತ್ಮಕ ಸಲಹೆಗಳನ್ನು ನಮ್ಮ ಹೋರಾಟ ಸಮಿತಿ ಸರ್ಕಾರದ ಮುಂದೆ ಮಂಡಿಸಿತು ಎಂದು ಚಂದ್ರಕಾಂತ ಕೊಚರೇಕರ ತಿಳಿಸಿದರು. ನಿಯೋಗದ ಜೊತೆ ಮಾತನಾಡಿದ ಸಿದ್ದರಾಮಯ್ಯ, ಅರಣ್ಯ ಭೂಮಿ ಸಾಗುವಳಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಬಡ ಜನರು ಆತಂಕ ಪಡುವ ಅಗತ್ಯವಿಲ್ಲ ಸ್ಪಷ್ಟ ಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ಅರಣ್ಯ ಭೂಮಿಯಲ್ಲಿನ ಒತ್ತುವರಿಯ ನೈಜ ಸ್ಥಿತಿಯ ಕುರಿತು ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸ್ಥಳ ತನಿಖೆ ನಡೆಸಿ ಉಪವಿಭಾಗೀಯ ಸಮಿತಿಗೆ ವರದಿ ಸಲ್ಲಿಸಬೇಕು. ಸ್ಥಳ ಮಹಜರು ದೃಢೀಕರಣ ಪತ್ರದ ದಾಖಲೆ ಪೂರೈಸುವ ಮೂಲಕ ಅರಣ್ಯವಾಸಿಗಳು ಅರಣ್ಯ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳವೈದ್ಯ ಉಪಸ್ಥಿತರಿದ್ದು, ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನ ಸೆಳೆಯುವಲ್ಲಿ ಸಹಕರಿಸಿದರು. ಬಳಿಕ ನಿಯೋಗ ರಾಜ್ಯದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ.ಯೋಗೇಶ ಅವರನ್ನು ಸಹ ಭೇಟಿಮಾಡಿ, ಸುಪ್ರೀಂ ಕೋರ್ಟಿಗೆ ಅರಣ್ಯವಾಸಿಗಳ ಪರ ಸರ್ಕಾರದಿಂದ ಅಗತ್ಯ ದೃಢೀಕರಣ ಸಲ್ಲಿಸುವ ಕುರಿತು ಕೋರಲಾಯಿತು. ನಿರ್ದೇಶಕರ ಸ್ಪಂದನೆ ಉತ್ತಮವಾಗಿತ್ತು. ಅವರ ಪ್ರಕಾರ ನಾವು ಮಂಡಿಸಿದ ಬೇಡಿಕೆಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಪರಿಗಣಿಸಿ, ಉನ್ನತಾಧಿಕಾರ ಸಮಿತಿಯ ಸಭೆ ಕರೆದು ಸೂಕ್ತ ನಿರ್ಣಯ ತೆಗೆದುಕೊಂಡಿರುವ ವಿಚಾರವನ್ನು ನಮಗೆ ತಿಳಿಸಿದ್ದಾರೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version