Home ನಮ್ಮ ಜಿಲ್ಲೆ ಚಿಕ್ಕಮಗಳೂರು ಧರ್ಮಸ್ಥಳ: ವಾಮಾಚಾರಿಗಳ ಹಿಂದೆ ಬಿದ್ದ ಎಸ್‌ಐಟಿ

ಧರ್ಮಸ್ಥಳ: ವಾಮಾಚಾರಿಗಳ ಹಿಂದೆ ಬಿದ್ದ ಎಸ್‌ಐಟಿ

0

ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇದೀಗ ವಾಮಾಚಾರಿಗಳ ಹಿಂದೆ ಬಿದ್ದಿದೆ.

ಬಂಗ್ಲೆಗುಡ್ಡದಲ್ಲಿ ಹೆಣಗಳ ರಾಶಿಯೇ ಇದೆ ಎಂದಿದ್ದ ವಿಠಲಗೌಡ ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅಲ್ಲದೆ ಬಂಗ್ಲೆಗುಡ್ಡದಲ್ಲಿ ವಾಮಾಚಾರ ಮಾಡಲಾಗಿದೆ ಎಂದೂ ಆರೋಪಿಸಿದ್ದರು.

ಈ ವಿಚಾರವನ್ನು ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿಯವರಿಗೂ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು, ಬೆಳ್ತಂಗಡಿ ಸುತ್ತಮುತ್ತ ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಧರ್ಮಸ್ಥಳ ಪೊಲೀಸರಿಗೆ ಹಾಗೂ ಬೆಳ್ತಂಗಡಿ ಪೊಲೀಸರಿಗೆ ಜವಾಬ್ದಾರಿ ವಹಿಸಲಾಗಿದೆ. ತಲೆಬುರುಡೆ ಇಟ್ಟುಕೊಂಡು ವಾಮಾಚಾರದಲ್ಲಿ ತೊಡಗುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಂತಹವರು ಯಾರಾದರೂ ಸಿಕ್ಕಿದರೆ ಎಸ್‌ಐಟಿ ಠಾಣೆಗೆ ಕರೆಸಲು ಸೂಚನೆ ನೀಡಲಾಗಿದೆ.

ತನಿಖಾ ಪ್ರಕ್ರಿಯೆ ಮುಂದಕ್ಕೆ: ಭಾನುವಾರ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅಧಿಕಾರಿಗಳೊಂದಿಗೆ ತಡರಾತ್ರಿ ತನಕ ಸಭೆ ನಡೆಸಿ ಸೋಮವಾರ ಬೆಳಿಗ್ಗೆ ನಿರ್ಗಮಿಸಿದ್ದಾರೆ. ಅಧಿಕಾರಿಗಳಿಂದ ಅವರು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಂಗ್ಲೆಗುಡ್ಡದಿಂದ ಬುರುಡೆ ತಂದಿದ್ದಾಗಿ ಸೌಜನ್ಯ ಮಾವ ವಿಠಲ ಗೌಡ ಹೇಳಿದ್ದು, ಬಂಗ್ಲೆಗುಡ್ಡದಲ್ಲಿ ಇಂದು ಮಹಜರು ನಡೆಸುವ ಸಾಧ್ಯತೆ ಇತ್ತು, ಆದರೆ ಕೊನೆ ಕ್ಷಣದಲ್ಲಿ ಮಹಜರು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.ಬಹುತೇಕ ಮಂಗಳವಾರ ಬಂಗ್ಲೆಗುಡ್ಡದ ಇಂಚಿಂಚೂ ಶೋಧ ನಡೆಸುವ ಸಾಧ್ಯತೆ ಇದೆ.

ಮಂಗಳವಾರ ಬಂಗ್ಲೆಗುಡ್ಡದಲ್ಲಿ ಶೋಧ ಸಾಧ್ಯತೆ: ಬಂಗ್ಲೆಗುಡ್ಡದಲ್ಲಿ ಇಂದು ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಂಗ್ಲೆಗುಡ್ಡ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ. ವಿಠಲಗೌಡ ಈಗಾಗಲೇ ತೋರಿಸುವ ಸ್ಥಳ ಗುರುತು ಮಾಡಲಾಗಿದ್ದು ಇಲ್ಲಿ ಶೋಧ ಕಾರ್ಯ ನಡೆಸುವ ಸಾಧ್ಯತೆ ಇದೆ. ಇದರೊಂದಿಗೆ, ಧರ್ಮಸ್ಥಳ ಆಸುಪಾಸಿನಲ್ಲಿ ಮತ್ತೆ ಉತ್ಖನನ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಂದೆಡೆ, ಧರ್ಮಸ್ಥಳ ಗ್ರಾ.ಪಂ.ನ ಶವ ದಫನ್ ದಾಖಲೆಗಳ ಬಗ್ಗೆ ಎಸ್‌ಐಟಿ ಈಗಾಗಲೇ ಮಾಹಿತಿ ಕಲೆ ಹಾಕಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಶವಗಳ ದಫನ್‌ನಲ್ಲೇ ಅಕ್ರಮ ಎಸಗಲಾಗಿದೆ ಎಂಬ ಆರೋಪ ಸಂಬಂಧವೂ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಇದೇ ಸಮಯ ಬಂಗ್ಲೆಗುಡ್ಡದಲ್ಲಿ ಮಹಜರು ಪ್ರಕ್ರಿಯೆ ಆರಂಭಕ್ಕೂ ಮುನ್ನಾ, ಗುಡ್ಡದಲ್ಲಿರುವ ಮರಗಳ ಸರ್ವೆ ಕಾರ್ಯ ಆರಂಭವಾಗಿದೆ. ಈ ಜಾಗ ಅರಣ್ಯ ಇಲಾಖೆಗೆ ಸೇರಿರುವುದರಿಂದ ಇಲ್ಲಿ ಎಷ್ಟು ಮರಗಳಿವೆ, ಈ ಮರಗಳ ಅಂದಾಜು ವಯಸ್ಸೆಷ್ಟು ಎಂಬ ವರದಿ ಸಿದ್ಧಪಡಿಸಲು ಎಸ್‌ಐಟಿ ಅಧಿಕಾರಿಗಳು ಇಲಾಖೆಗೆ ಸೂಚನೆ ನೀಡಿದ್ದಾರೆ. ಹಾಗೊಂದು ವೇಳೆ ಮಹಜರು ವೇಳೆ ಭೂಮಿ ಅಗೆಯುವ ಸಮಯ ಬಂದಲ್ಲಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅನುಮತಿ ಪಡೆಯಲು ಅನುವಾಗುವಂತೆ ಈ ಮರಗಳ ಎಣಿಕೆ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿ ಬಂದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version