Home ನಮ್ಮ ಜಿಲ್ಲೆ ಚಾಮರಾಜನಗರ ಚಾಮರಾಜನಗರ: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನ

ಚಾಮರಾಜನಗರ: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನ

0

ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗರಿಗೆ ಹುಲಿ ಕಾಣಿಸಿಕೊಂಡಿದ್ದು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಕಾಣಿಸಿಕೊಂಡು ಒಣ ಹುಲ್ಲು ಹಾಗೂ ಸಣ್ಣ ಪುಟ್ಟ ಮರಗಳು ಬೆಂಕಿಗೆ ಆಹುತಿಯಾಗಿತ್ತು. ತದನಂತರ ಮೂರ್ನಾಲ್ಕು ದಿನಗಳ ಕಾಲ ಸತತವಾಗಿ ಬಿದ್ದ ಮಳೆಗೆ ಅರಣ್ಯವು ಅಚ್ಚಹಸಿರಿನಿಂದ ಕೂಡಿದ್ದು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ.

ಇದೀಗ ಅರಣ್ಯವು ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸಫಾರಿಗೆ ತೆರಳುವ ವನ್ಯಪ್ರಿಯರಿಗೆ ಒಂದಲ್ಲ ಒಂದು ಪ್ರಾಣಿಗಳು ಕಾಣಸಿಗುತ್ತಿವೆ. ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸಫಾರಿ ಕೇಂದ್ರ ಅಕ್ಟೋಬರ್ 2, 2024ರಂದು ಪ್ರಾರಂಭಿಸಲಾಗಿತ್ತು.

ಆದರೆ ಇದುವರೆಗೂ ಒಮ್ಮೆಯೂ ಹುಲಿರಾಯ ದರ್ಶನ ನೀಡಿರಲಿಲ್ಲ. ಅಜ್ಜೀಪುರ ಸಫಾರಿ ಕೇಂದ್ರದಿಂದ ತೆರಳುವ ಪ್ರವಾಸಿಗರಿಗೆ ಆನೆ ಕಾಡೆಮ್ಮೆ, ಜಿಂಕೆ, ಕಡವೆ, ಕರಡಿ, ತೋಳ ನರಿ ಇನ್ನಿತರ ಪ್ರಾಣಿಗಳು ಮಾತ್ರ ಕಾಣಿಸಿಕೊಂಡಿದ್ದವು. ಶನಿವಾರ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯ ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಪ್ರವಾಸದ ಸಂದರ್ಭದಲ್ಲಿ ಎಂಟು ಜನ ಬೆಂಗಳೂರು ಮೂಲದ ಪ್ರವಾಸಿಗರು ಸಫಾರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಅಜ್ಜೀಪುರ ಸಫಾರಿ ಕೇಂದ್ರಕ್ಕೆ ಇದುವರೆಗೆ 1,496 ಪ್ರವಾಸಿಗರು ಆಗಮಿಸಿದ್ದು 77,25,450 ರೂ. ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

Exit mobile version