Home ನಮ್ಮ ಜಿಲ್ಲೆ ಬೆಂಗಳೂರು ‘ಸುಳ್ಳು ಲೆಕ್ಕ’ ನೀಡಿ ರೈತರಿಗೆ ದ್ರೋಹವೆಸಗಿದ ಜೋಶಿಗೆ ಸಿದ್ದು ಗುದ್ದು!

‘ಸುಳ್ಳು ಲೆಕ್ಕ’ ನೀಡಿ ರೈತರಿಗೆ ದ್ರೋಹವೆಸಗಿದ ಜೋಶಿಗೆ ಸಿದ್ದು ಗುದ್ದು!

0

ಕಬ್ಬು ಬೆಳೆಗಾರರ ಹೋರಾಟದಿಂದ ಈಗಾಗಲೇ ಬಿಸಿಯಾಗಿರುವ ರಾಜ್ಯ ರಾಜಕೀಯದಲ್ಲಿ, ಇದೀಗ ‘ಎಥೆನಾಲ್ ಹಂಚಿಕೆ’ಯ ವಿಚಾರ ಹೊಸ ಸಮರಕ್ಕೆ ನಾಂದಿ ಹಾಡಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುಳ್ಳು ಮಾಹಿತಿ ನೀಡಿ ರಾಜ್ಯದ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಮಜಲು ತಲುಪಿದೆ.

ಸತ್ಯ ಯಾವುದು, ಸುಳ್ಳು ಯಾವುದು?: ಈ ರಾಜಕೀಯ ಜಟಾಪಟಿಯ ಕೇಂದ್ರಬಿಂದು ಇರುವುದು ಅಂಕಿಅಂಶಗಳಲ್ಲೇ. “2024-25ನೇ ಸಾಲಿನಲ್ಲಿ ಕರ್ನಾಟಕದ 46 ಡಿಸ್ಟಿಲರಿಗಳ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯ 270 ಕೋಟಿ ಲೀಟರ್. ಆದರೆ, ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ ನಮ್ಮ ರಾಜ್ಯದಿಂದ ಹಂಚಿಕೆ ಮಾಡಿರುವುದು ಕೇವಲ 47 ಕೋಟಿ ಲೀಟರ್,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ತಮ್ಮ ಆರೋಪಕ್ಕೆ ಮತ್ತಷ್ಟು ಬಲ ತುಂಬಿರುವ ಅವರು, “ಈ ಅಂಕಿಅಂಶ ನನ್ನದಲ್ಲ, ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ 2025ರ ಆಗಸ್ಟ್ 6ರಂದು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲೇ ಇದು ದಾಖಲಾಗಿದೆ,” ಎಂದು ತಿರುಗೇಟು ನೀಡಿದ್ದಾರೆ.

“ಒಂದೋ ಜೋಶಿಯವರು ಅಂದು ಲೋಕಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ, ಇಲ್ಲವೇ ಇಂದು ಸುಳ್ಳು ಹೇಳುತ್ತಿದ್ದಾರೆ. ಎರಡರಲ್ಲಿ ಒಂದು ನಿಜವಾದರೂ ಅವರು ಸುಳ್ಳುಗಾರ ಎಂಬುದು ಸಾಬೀತಾಗುತ್ತದೆ,” ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ಕುಟುಕಿದ್ದಾರೆ.

ಕರ್ನಾಟಕಕ್ಕೊಂದು ನ್ಯಾಯ, ಗುಜರಾತ್‌ಗೊಂದು ನ್ಯಾಯವೇ?: ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಬಯಲಿಗೆಳೆದಿರುವ ಸಿದ್ದರಾಮಯ್ಯ, “ಕೇವಲ 40 ಕೋಟಿ ಲೀಟರ್ ಉತ್ಪಾದನಾ ಸಾಮರ್ಥ್ಯವಿರುವ ಗುಜರಾತ್‌ಗೆ 31 ಕೋಟಿ ಲೀಟರ್ ಎಥೆನಾಲ್ ಹಂಚಿಕೆ ಮಾಡಲಾಗಿದೆ.

ಆದರೆ, 270 ಕೋಟಿ ಲೀಟರ್ ಸಾಮರ್ಥ್ಯವಿರುವ ನಮಗೆ ಸಿಕ್ಕಿರುವುದು ಕೇವಲ 47 ಕೋಟಿ ಲೀಟರ್. ಇದು ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಸಗುತ್ತಿರುವ ಘೋರ ಅನ್ಯಾಯವಲ್ಲದೆ ಮತ್ತೇನು?” ಎಂದು ಪ್ರಶ್ನಿಸಿದ್ದಾರೆ.

“ರಾಜ್ಯದ ರೈತರ ಪರವಾಗಿ ನಿಂತು, ಪ್ರಧಾನಿ ಮೋದಿಯವರ ಮುಂದೆ ನಮ್ಮ ಹಕ್ಕನ್ನು ಮಂಡಿಸಬೇಕಿದ್ದ ಪ್ರಹ್ಲಾದ್ ಜೋಶಿ, ನಮ್ಮ ಮೇಲೆಯೇ ಆರೋಪ ಮಾಡಿ ‘ಉತ್ತರಕುಮಾರನ ಪೌರುಷ’ ಪ್ರದರ್ಶಿಸುತ್ತಿದ್ದಾರೆ. ರಾಜ್ಯದ ರೈತರನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ನೀಡಿರುವ ಈ ಹೇಳಿಕೆಗಾಗಿ ಅವರು ರಾಜ್ಯದ ರೈತರ ಕ್ಷಮೆ ಯಾಚಿಸಬೇಕು,” ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈಗಲಾದರೂ ಕಾಲ ಮಿಂಚಿಲ್ಲ, ಪ್ರಧಾನಿಗಳ ಮೇಲೆ ಒತ್ತಡ ತಂದು ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೊಡಿಸುವ ಮೂಲಕ ರೈತರಿಗೆ ಬಗೆದ ದ್ರೋಹದ ಪಾಪವನ್ನು ತೊಳೆದುಕೊಳ್ಳಲಿ ಎಂದು ಜೋಶಿಯವರಿಗೆ ಸವಾಲು ಹಾಕಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳ ನಡುವೆ, ಕಬ್ಬು ಬೆಳೆಗಾರರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದ್ದು, ಕೇಂದ್ರ ಸಚಿವರು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version