ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದ ಹೀನಾಯ ಸೋಲನ್ನು ಈಗಲೇ ಊಹಿಸಿರುವ ರಾಹುಲ್ ಗಾಂದಿ ಅವರು ಮೊದಲ ಹಂತದ ಮತದಾನಕ್ಕೆ ಮುನ್ನವೇ ಮೈ ಪರಚಿಕೊಳ್ಳುತ್ತಿದ್ದಾರೆ ! ಹಾಗಾಗಿ, ಸೋಲಿಗೊಂದು ಪೂರ್ವ ನಿರೀಕ್ಷಣಾ ಜಾಮೀನು ಪಡೆಯಲು, ಮತ್ತೆ ಮತ ಕಳವು ಪ್ರಹಸನ ಆರಂಭಿಸಿದ್ದಾರೆ. ನಿರಂತರ ಸೋಲುಗಳು ಅವರನ್ನು ಕಂಗೆಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿಹಾರದಲ್ಲಿ ಮತ ಕಳ್ಳತನ ನಡೆದಿದೆ ಎಂಬ ರಾಹುಲ್ ಗಾಂದಿಯವರ ಆರೋಪಕ್ಕೆ ಸಾಮಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್ ಅಸ್ತಿತ್ವದ ಆತಂಕವೇ ಅವರನ್ನು ಈ ಭೀತಿಗೆ ತಳ್ಳಿದೆ. ಸಂದೇಹವೇ ಬೇಡ, ಅವರೀಗ ಮತ ಮತಿಭ್ರಮಣೆಗೆ ಒಳಗಾಗಿದ್ದಾರೆ. ನಿತ್ಯವೂ ಮತಗಳ್ಳತನದ ಜಪ ನಿರತ ರಾಹುಲ್, ಈಗ ಒಂದು ಹೆಜ್ಜೆ ಮುಂದೆ ಹೋಗಿ ಮತದಾನಕ್ಕೆ ಮುನ್ನವೇ ಮತಗಳ್ಳತನವನ್ನು ಊಹಿಸಿದ್ದಾರೆ.
ಇದೊಂದು ರೀತಿ ನಾಳೆ ನಮ್ಮ ಮನೆಯಲ್ಲಿ ಕಳ್ಳತನ ನಡೆಯಲಿಲದೆ ಎಂದು ಅತ್ತಂತೆ! ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗದ ಮೇಲೆ ಹತಾಶೆಯ ಸರಣಿ ಆರೋಪ ಮಾಡುವುದೇ ಅವರ ಕಾಯಕವಾಗಿದೆ. ಇದೆಲ್ಲವೂ ಏನನ್ನು ಹೇಳುತ್ತದೆ? ಬಿಹಾರದಲ್ಲಿ ಮತದಾನಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಯಾರು ಬೇಕಾದರೂ ಮೇಲಿನ ಪ್ರಶ್ನೆಗೆ ಉತ್ತರ ನೀಡಬಹುದು !
‘ಹರಿಯಾಣ ಚುನಾವಣೆಯಲ್ಲೂ 25 ಲಕ್ಷ ಮತಕಳವು ಆಗಿದೆ ಎಂಬುದು ಅವರ ನೂರೊಂದನೆಯ ಆರೋಪ. ಸದ್ಯ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಹುರುಳಿಲ್ಲದ ಚುನಾವಣಾ ಅಕ್ರಮದ ಆರೋಪ ಪಟ್ಟಿ ಮುಂದಿಟ್ಟಿರುವ ರಾಹುಲ್ ಅವರು ಇದನ್ನು ಆಧರಿಸಿ ಇದುವರೆಗೂ ಚುನಾವಣಾ ಆಯೋಗಕ್ಕೆ ಯಾಕೆ ದೂರು ಸಲ್ಲಿಸಿಲ್ಲ? ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಲಿಲ್ಲ? ಇದೆಲ್ಲದಕ್ಕಿಂತ ಪ್ರಮುಖವಾಗಿ ಬೂತ್ ಮಟ್ಟದ ಕಾಂಗ್ರೆಸ್ ಏಜೆಂಟರು ಇದುವರೆಗೂ ಮೌನವಾಗಿದ್ದರು ಏಕೆ ?
ಮತದಾನ ನಡೆಯುವಾಗ ಅವರ ಬೂತ್ ಮಟ್ಟದ ಕಾಂಗ್ರೆಸ್ ಏಜೆಂಟರು ಮತಗಟ್ಟೆಯಲ್ಲಿ ಇರಲಿಲ್ಲವೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬದಲು, ಎಲ್ಲವನ್ನೂ ಆಯೋಗದ ಮೇಲೆ ಹೊರಿಸುವುದು ದುರ್ಬಲರ ಲಕ್ಷಣ. ಕುಣಿಯಲಾರದವ ನೆಲ ಡೊಂಕು ಎಂಬ ನಾಣ್ಣುಡಿಗೆ ರಾಹುಲ್ ದೊಡ್ಡ ಉದಾಹರಣಣೆಯಾಗಿದ್ದಾರೆ.
ಕಾಂಗ್ರೆಸ್ ಆಡಳಿತ ಕಾಲದಲ್ಲಿಯೇ EVM ಮತಯಂತ್ರ ಬಳಕೆಗೆ ಬಂದಿದ್ದು. ಅದನ್ನು ಪರಿಚಯಿಸಿದ ನೀವೇ ಈಗ ಇವಿಎಂ ಮತಯಂತ್ರದ ಮೂಲಕ ಮತಚೋರತನ ಮಾಡಬಹುದು ಎಂದು ಆರೋಪಿಸಿದ್ದೀರಿ. ಹಾಗಾದರೆ ಆ ಲೆಕ್ಕಾಚಾರದಿಂದಲೇ ನಿಮ್ಮ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮತಯಂತ್ರವನ್ನು ಪರಿಚಯಿಸಿದಿರಾ ? ಇದೀಗ ಮತದಾರರ ಪಟ್ಟಿಯನ್ನು ಅನುಮಾನಿಸಿ ಆರೋಪಿಸುತ್ತಿದ್ದೀರಿ, ಮುಂದೆ ದೇಶದ ಮತದಾರರೆಲ್ಲರೂ ನಕಲಿ ಎಂದು ನೀವು ಆರೋಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಏಕೆಂದರೆ ಜಗತ್ತಿನ ಮುಂದೆ ಭಾರತಕ್ಕೆ ಕಳಂಕ ತರುವುದು ನಿಮ್ಮ ಅಜೆಂಡಾ ಆಗಿದೆ. ಇದಕ್ಕೆ ಕುಮ್ಮಕ್ಕು ನೀಡಲು ದೇಶ ವಿರೋಧಿ ಶಕ್ತಿಗಳು ನಿಮ್ಮೊಂದಿಗಿದ್ದಾರೆ.
ಬ್ಯಾಲೆಟ್ ಪೇಪರ್ ಮೂಲಕ ಈ ದೇಶದಲ್ಲಿ ಐದು ದಶಕಗಳಿಗೂ ಹೆಚ್ಚಿನ ಕಾಲ ಮತಕೇಂದ್ರಗಳ ಮೇಲೆ ಲಗ್ಗೆ, ಮತದಾರರ ಹೆಸರಿನಲ್ಲಿ ಗುಂಡಾಗಿರಿಯ ಅಟ್ಟಹಾಸ ಮೆರೆದು ನಿರಂತರ ಅಧಿಕಾರ ಅನುಭವಿಸಿದ ನಿಮಗೆ ಸುಧಾರಿತ ಚುನಾವಣಾ ನೀತಿ, ವಿಧಾನಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಮಾನ್ಯ ರಾಹುಲ್ ಗಾಂಧಿಯವರೇ, ನಿಮಗೊಂದು ಬಹಿರಂಗ ಸವಾಲು,ಇವಿಎಂ ಮತಯಂತ್ರದ ಹಾಗೂ ದೋಷಪೂರಿತ ಮತದಾರರ ಪಟ್ಟಿಯ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎನ್ನುವ ನಿಮ್ಮ ಆರೋಪ ಸತ್ಯವೇ ಆಗಿದ್ದರೆ ನಿಮ್ಮನ್ನೂ ಸೇರಿದಂತೆ ಗೆಲುವು ಸಾಧಿಸಿರುವ ಕಾಂಗ್ರೆಸ್ ಸಂಸದರು, ಶಾಸಕರೆಲ್ಲರೂ ಗೆದ್ದಿರುವುದೆಲ್ಲಾ ಮತಕಳವು ವ್ಯವಸ್ಥೆ ಆದರಿಸಿಯೇ ಅಲ್ಲವೇ?
ದೇಶದಲ್ಲಿ ಆರಿಸಿಬಂದಿರುವ ಕಾಂಗ್ರೆಸ್ ಲೋಕಸಭಾ ಸದಸ್ಯರುಗಳು, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಸದಸ್ಯರುಗಳಿಂದ ರಾಜೀನಾಮೆ ಸಲ್ಲಿಸಿ ನ್ಯಾಯಾಲಯದ ಮುಂದೆ ಪ್ರಮಾಣ ಪತ್ರ ಸಲ್ಲಿಸಿ ನೋಡೋಣ? ಇಂಥಾ ನಡವಳಿಕೆ ಪ್ರದರ್ಶಿಸಿ ಆರೋಪಿಸಿದರೆ ಮಾತ್ರ ಈ ದೇಶದ ಜನ ನಿಮ್ಮ ಆರೋಪದಲ್ಲಿ ತಿರುಳಿದೆ ಎನ್ನುವುದನ್ನು ಒಪ್ಪಿಕೊಳ್ಳಬಹುದು. ಸದ್ಯದ ನಿಮ್ಮ ಆರೋಪಗಳೆಲ್ಲವೂ ತಿರುಳಿಲ್ಲದ ಮೂರ್ಖತನದ ಪರಮಾವಧಿ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದಿದ್ದಾರೆ.
