Home ನಮ್ಮ ಜಿಲ್ಲೆ ಬೆಂಗಳೂರು ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌

ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌

0

ಬೆಂಗಳೂರು: “ರಾಜ್ಯದ 1 ಲಕ್ಷ ಪೊಲೀಸ್ ಸಿಬ್ಬಂದಿಗೆ ಇಂದಿನಿಂದ ನೂತನ ಪೀಕ್ ಕ್ಯಾಪ್ ವಿತರಣೆ ಪ್ರಾರಂಭವಾಗುತ್ತಿದೆ. ಜೊತೆಗೆ ಡ್ರಗ್ ಮುಕ್ತ ಕರ್ನಾಟಕ ನಿರ್ಮಾಣ ನನ್ನ ಗುರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ‘ಸನ್ಮಿತ್ರ’ ಕಾರ್ಯಯೋಜನೆ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು —

“ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮೆಲ್ಲರ ಗುರಿಯಾಗಬೇಕು. ಯುವಜನ ಶಕ್ತಿಯು ಮಾದಕ ವಸ್ತುಗಳ ಬಲಿಯಾಗಬಾರದು. ಪೊಲೀಸ್ ಇಲಾಖೆಯು ಕಟಿಬದ್ಧ ನಿಲುವು ತಳೆಯಬೇಕು,” ಎಂದು ಹೇಳಿದ್ದಾರೆ.

ಮುಂದುವರಿದು ಅವರು ಹೇಳಿದರು: “ದಕ್ಷಿಣ ಕನ್ನಡದಲ್ಲಿ ಕೋಮು ಘರ್ಷಣೆ ಹಾಗೂ ಅನೈತಿಕ ಪೊಲೀಸ್‌ ಗಿರಿ ಹೆಚ್ಚಾಗಿತ್ತು. ಅಧಿಕಾರಿಗಳ ಬದಲಾವಣೆ ಮೂಲಕ ನಿಯಂತ್ರಣ ಸಾಧಿಸಲಾಗಿದೆ. ಅದೇ ರೀತಿ ಮಾದಕ ವಸ್ತು ಹಾವಳಿಯನ್ನು ಕೂಡ ಪೊಲೀಸ್ ಇಲಾಖೆ ತಡೆಗಟ್ಟಬಹುದು. ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.”

ಅವರು ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಾ ಹೇಳಿದರು: “ಕೆಲವರು ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ, ಡ್ರಗ್ ಜಾಲದ ಜೊತೆ ಶಾಮೀಲಾಗಿದ್ದಾರೆ. ಇಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ರೌಡಿಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ಶಕ್ತಿ ನಿಮ್ಮಲ್ಲಿದೆ. ಅಪರಾಧಿಗಳಿಗೆ ಪೊಲೀಸ್ ಬಗ್ಗೆ ಭಯ ಕಡಿಮೆಯಾಗಿದೆ, ಇದನ್ನು ಮರಳಿ ತರಬೇಕಾಗಿದೆ.”

ಸಿದ್ದರಾಮಯ್ಯ ಅವರು ಪೀಕ್ ಕ್ಯಾಪ್ ವಿನ್ಯಾಸವನ್ನು ತಾವು ಸ್ವತಃ ಆಯ್ಕೆ ಮಾಡಿದ ಬಗ್ಗೆ ಹೇಳುತ್ತಾ, “1956ರಿಂದ ಸುಮಾರು 70 ವರ್ಷಗಳಿಂದ ಇದ್ದ ಹಳೆಯ ಮಾದರಿಯ ಕ್ಯಾಪ್‌ ಅನ್ನು ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ನೀಡಲಾಗಿದ್ದು, ಇದು ಅವರ ಆತ್ಮವಿಶ್ವಾಸ ಹೆಚ್ಚಿಸಲಿದೆ. ಕೇವಲ ಕ್ಯಾಪ್ ಬದಲಾಗುವುದಲ್ಲ, ಕಾರ್ಯಪಟುತೆಯೂ ಬದಲಾಗಲಿ,” ಎಂದು ಹೇಳಿದರು.

ಮುಖ್ಯಮಂತ್ರಿ ಅವರು ಪೊಲೀಸ್ ಇಲಾಖೆಯ ಸಾಧನೆಯನ್ನು ಮೆಚ್ಚಿಕೊಂಡು, “ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ವರದಿ ರಾಜ್ಯದ ಘನತೆ ಹೆಚ್ಚಿಸಿದೆ,” ಎಂದು ಸಂತೋಷ ವ್ಯಕ್ತಪಡಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version