Home ನಮ್ಮ ಜಿಲ್ಲೆ ಬೆಂಗಳೂರು ರಾಮೇಶ್ವರಂ ಕೆಫೆ: ಊಟದಲ್ಲಿ ಹುಳ ಪತ್ತೆ, ಉಲ್ಟಾ ಹೊಡೆದ ‘ಬ್ಲ್ಯಾಕ್‌ಮೇಲ್’ ಕೇಸ್!

ರಾಮೇಶ್ವರಂ ಕೆಫೆ: ಊಟದಲ್ಲಿ ಹುಳ ಪತ್ತೆ, ಉಲ್ಟಾ ಹೊಡೆದ ‘ಬ್ಲ್ಯಾಕ್‌ಮೇಲ್’ ಕೇಸ್!

0

ರಾಮೇಶ್ವರಂ ಕೆಫೆ: ತನ್ನ ರುಚಿಕರ ಇಡ್ಲಿ-ದೋಸೆಗಳಿಂದ ಖ್ಯಾತಿಗಳಿಸಿದ್ದ ರಾಮೇಶ್ವರಂ ಕೆಫೆ, ಇತ್ತೀಚಿನ ದಿನಗಳಲ್ಲಿ ಸತತವಾಗಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BIA) ಕೆಫೆ ಶಾಖೆಯಲ್ಲಿ ಊಟದಲ್ಲಿ ಹುಳ ಪತ್ತೆಯಾಗಿದ್ದ ಪ್ರಕರಣವೊಂದು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಸ್ವತಃ ಕೆಫೆ ಮಾಲೀಕರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.

ಏನಿದು ಪ್ರಕರಣ?: ಕೆಲ ದಿನಗಳ ಹಿಂದೆ ಏರ್‌ಪೋರ್ಟ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಊಟದಲ್ಲಿ ಹುಳವೊಂದು ಪತ್ತೆಯಾಗಿತ್ತು. ಇದನ್ನು ಅಲ್ಲಿನ ಯುವಕರು ವಿಡಿಯೋ ಮಾಡಿಕೊಂಡಿದ್ದರು. ಈ ಘಟನೆ ನಡೆದ ಸಮಯದಲ್ಲೇ ಕೆಫೆಯ ಮಾಲೀಕರಿಗೆ ಅನಾಮಧೇಯ ಕರೆಯೊಂದು ಬಂದಿದ್ದು, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೇ ಅಸ್ತ್ರವಾಗಿಸಿಕೊಂಡ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸುಮಂತ್ ವಿಡಿಯೋ ಮಾಡಿದ ಯುವಕರೇ ತಮಗೆ ಹಣಕ್ಕಾಗಿ ‘ಬ್ಲ್ಯಾಕ್‌ಮೇಲ್’ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಗ್ರಾಹಕರ ಮೇಲೇ ಗಂಭೀರ ಆರೋಪ ಹೊರಿಸಲಾಗಿತ್ತು.

ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲು: ವೈಯಾಲಿಕಾವಲ್ ಠಾಣೆಯಿಂದ ವರ್ಗಾವಣೆಯಾಗಿ ಬಂದ ಈ ಪ್ರಕರಣವನ್ನು ಏರ್‌ಪೋರ್ಟ್ ಠಾಣಾ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ವಿಡಿಯೋ ಮಾಡಿದ ಯುವಕರು ಕೇವಲ ಅಶುಚಿತ್ವವನ್ನು ಪ್ರಶ್ನಿಸಿದ್ದರೆ ಹೊರತು, ಯಾವುದೇ ಹಣದ ಬೇಡಿಕೆ ಇಟ್ಟಿರಲಿಲ್ಲ. ಬೇರೆ ಯಾರೋ ಮೂರನೇ ವ್ಯಕ್ತಿ ಈ ಸನ್ನಿವೇಶದ ಲಾಭ ಪಡೆಯಲು ಕರೆ ಮಾಡಿ ಬೆದರಿಕೆ ಹಾಕಿದ್ದು ಸಾಬೀತಾಗಿದೆ.

ಮಾಲೀಕರ ವಿರುದ್ಧವೇ ತಿರುಗುಬಾಣ: ತಮ್ಮ ತಪ್ಪು ಇಲ್ಲದಿದ್ದರೂ ಬ್ಲ್ಯಾಕ್‌ಮೇಲರ್ ಪಟ್ಟ ಕಟ್ಟಲು ಯತ್ನಿಸಿದ ಕೆಫೆ ಮಾಲೀಕರ ಕ್ರಮದಿಂದ ನೊಂದ ಯುವಕ, ತಮ್ಮ ಮಾನಹಾನಿ ಮಾಡಲಾಗಿದೆ ಎಂದು ಪ್ರತಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಳು ದೂರು ನೀಡಿ ದಾರಿ ತಪ್ಪಿಸಲು ಯತ್ನಿಸಿದ ಆರೋಪದಡಿ ಕೆಫೆ ಮಾಲೀಕರು ಮತ್ತು ಮ್ಯಾನೇಜರ್ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಈಗಾಗಲೇ ಹೈದರಾಬಾದ್ ಶಾಖೆಯಲ್ಲಿ ನಡೆದ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಮತ್ತು ಅಲ್ಲಿ ಕಂಡುಬಂದ ಅವ್ಯವಸ್ಥೆಗಳ ಬಗ್ಗೆ ಸುದ್ದಿಯಾಗಿದ್ದ ರಾಮೇಶ್ವರಂ ಕೆಫೆಗೆ, ಈ ಹೊಸ ಪ್ರಕರಣ ಮತ್ತಷ್ಟು ಮುಜುಗರ ತಂದೊಡ್ಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version