Home ನಮ್ಮ ಜಿಲ್ಲೆ ಬೆಂಗಳೂರು ಡಿಕೆಶಿ ಮನೆಯಲ್ಲಿ ‘ದೋಸ್ತಿ’ ದರ್ಬಾರ್: ಸಿದ್ದುಗೆ ನಾಟಿಕೋಳಿ ಔತಣ!

ಡಿಕೆಶಿ ಮನೆಯಲ್ಲಿ ‘ದೋಸ್ತಿ’ ದರ್ಬಾರ್: ಸಿದ್ದುಗೆ ನಾಟಿಕೋಳಿ ಔತಣ!

0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು, ಬಣ ರಾಜಕೀಯದ ಚರ್ಚೆಗಳು ಜೋರಾಗಿರುವಾಗಲೇ, ಇತ್ತೀಚೆಗೆ ‘ಬ್ರೇಕ್‌ಫಾಸ್ಟ್‌ ಡಿಪ್ಲೋಮಸಿ’ (ಉಪಾಹಾರ ರಾಜಕೀಯ) ಭಾರಿ ಸದ್ದು ಮಾಡುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಬಾಂಧವ್ಯದ ಕುರಿತು ಏಳುತ್ತಿರುವ ಅನುಮಾನಗಳಿಗೆ ತೆರೆ ಎಳೆಯಲು, ಇಬ್ಬರೂ ನಾಯಕರು ಈಗ ‘ಒಗ್ಗಟ್ಟಿನ ಮಂತ್ರ’ ಜಪಿಸುತ್ತಿದ್ದಾರೆ.

ಸದಾಶಿವನಗರದಲ್ಲಿ ಆತ್ಮೀಯ ಸ್ವಾಗತ: ಕಳೆದ ಶನಿವಾರವಷ್ಟೇ ಸಿಎಂ ಕಾವೇರಿ ನಿವಾಸದಲ್ಲಿ ಉಪಾಹಾರ ಸೇವಿಸಿದ್ದ ಜೋಡಿ, ಇಂದು ಡಿಕೆಶಿ ಸರದಿ. ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು.

ಸಿಎಂ ಆಗಮಿಸುತ್ತಿದ್ದಂತೆಯೇ ಡಿಕೆ ಸಹೋದರರಾದ ಶಿವಕುಮಾರ್ ಮತ್ತು ಸುರೇಶ್ ತೋರಿದ ಆತೀಥ್ಯ ಎಲ್ಲರ ಗಮನ ಸೆಳೆಯಿತು. ಸಂಸದ ಡಿಕೆ ಸುರೇಶ್ ಹಿರಿಯರಾದ ಸಿದ್ದರಾಮಯ್ಯನವರ ಕಾಲಿಗೆ ಬಿದ್ದು ನಮಸ್ಕರಿಸುವ ಮೂಲಕ ಗೌರವ ಸೂಚಿಸಿದರೆ, ಡಿಕೆಶಿ ಹಸ್ತಲಾಘವ ನೀಡಿ ನಗುಮುಖದಿಂದ ಬರಮಾಡಿಕೊಂಡರು.

ಇಡ್ಲಿ ಜೊತೆ ಘಮಘಮಿಸಿದ ನಾಟಿಕೋಳಿ!: ರಾಜಕೀಯದಷ್ಟೇ ಈ ಭೇಟಿಯ ಹೈಲೈಟ್ ಆಗಿದ್ದು ಅಲ್ಲಿನ ಮೆನು. ಭೋಜನ ಪ್ರಿಯರಾದ ಸಿದ್ದರಾಮಯ್ಯನವರಿಗಾಗಿ ಡಿಕೆ ಶಿವಕುಮಾರ್ ವಿಶೇಷ ಕಾಳಜಿ ವಹಿಸಿದ್ದರು. ಸಿಎಂ ಫೇವರೆಟ್ ‘ನಾಟಿಕೋಳಿ ಸಾಂಬಾರ್’ ಮತ್ತು ಮೃದುವಾದ ಇಡ್ಲಿಯನ್ನು ಸಿದ್ಧಪಡಿಸಲಾಗಿತ್ತು.

ಕುಣಿಗಲ್ ಶಾಸಕ ರಂಗನಾಥ್ ಮತ್ತು ಡಿಕೆ ಸುರೇಶ್ ಅವರೊಟ್ಟಿಗೆ ಕುಳಿತು ನಾಯಕರು ಉಪಾಹಾರ ಸವಿದರು. ರಾಜಕೀಯದ ಕಾವನ್ನು ತಣ್ಣಗಾಗಿಸಲು ಈ ಬಿಸಿಬಿಸಿ ನಾಟಿಕೋಳಿ ಸಾರು ಅಸ್ತ್ರವಾಗಿ ಬಳಕೆಯಾದಂತಿದೆ.

ಹೈಕಮಾಂಡ್ ಸಂದೇಶ: ಇದು ಕೇವಲ ಸೌಹಾರದಯುತ ಭೇಟಿಯಲ್ಲ, ಇದರ ಹಿಂದೆ ಹೈಕಮಾಂಡ್‌ನ ಸ್ಪಷ್ಟ ಸೂಚನೆಯಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಪಕ್ಷಗಳ ಟೀಕೆಗೆ ಮತ್ತು ಪಕ್ಷದೊಳಗಿನ ಗೊಂದಲಗಳಿಗೆ ಉತ್ತರ ನೀಡಲು, ನಾಯಕರು ಹೀಗೆ ಸಾರ್ವಜನಿಕವಾಗಿ ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯವಾಗಿತ್ತು.

ಒಂದೇ ವಾರದಲ್ಲಿ ನಡೆದ ಎರಡನೇ ಉಪಾಹಾರ ಸಭೆ ಇದಾಗಿದ್ದು, “ನಾವಿಬ್ಬರೂ ಒಂದೇ, ನಮ್ಮಲ್ಲಿ ಯಾವುದೇ ಬಿರುಕಿಲ್ಲ” ಎಂದು ಸಾರುವ ಪ್ರಯತ್ನ ಇದಾಗಿದೆ.ಗೃಹ ಸಚಿವ ಪರಮೇಶ್ವರ್ ಕೂಡ, “ಮುಂದೆ ನಾನೂ ಇವರಿಬ್ಬರನ್ನು ಊಟಕ್ಕೆ ಕರೆಯುತ್ತೇನೆ” ಎಂದು ಚಟಾಕಿ ಹಾರಿಸಿರುವುದು, ಕಾಂಗ್ರೆಸ್ ಪಾಳಯದಲ್ಲಿ ಈ ‘ಊಟದ ರಾಜಕೀಯ’ದ ಮಹತ್ವವನ್ನು ತೋರಿಸುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version