ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಕುರಿತಾಗಿ ನಿರಂತರ ಚರ್ಚೆಗಳು, ಊಹಾಪೋಹಗಳು ಜೋರಾಗುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಒಟ್ಟಿಗೆ ಉಪಹಾರಕ್ಕೆ ಸೇರಿರುವುದು ರಾಜಕೀಯ ವಲಯದಲ್ಲಿ ಹೊಸ ಸಂದೇಶ ನೀಡಿದೆ.
ಮಂಗಳವಾರ ಬೆಳಗ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸಕ್ಕೆ ಉಪಹಾರ ಸಭೆಗಾಗಿ ಆಗಮಿಸಿದರು. ಅವರು ಆಗಮಿಸಿದ ವೇಳೆ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಹೂಗುಚ್ಛ ನೀಡಿ ಸ್ವಾಗತಿಸಿದರು.
“ನಾವು ಒಂದೇ ತಂಡ” — ಡಿ.ಕೆ. ಶಿವಕುಮಾರ್: ಸೋಮವಾರ ರಾತ್ರಿ ಡಿ.ಕೆ. ಶಿವಕುಮಾರ್ “ಸಿಎಂ ಮತ್ತು ನಾನು ಒಂದೇ ತಂಡ. ರಾಜ್ಯದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸೋಕೆ ನಾವು ಜಂಟಿಯಾಗಿ, ಸಮನ್ವಯದಿಂದ ಕೆಲಸ ಮುಂದುವರಿಸುತ್ತೇವೆ” ಎಂದು ತಿಳಿಸಿದ್ದರು.
ಅಧಿಕಾರ ಹಂಚಿಕೆಯ ನಡುವೆಯೂ ರಾಜಕೀಯ ಮೃದು ಸಂದೇಶ: ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರ ಹಂಚಿಕೆ, ಮುಂದಿನ ನಾಯಕತ್ವ, 2.5 ವರ್ಷ ಸೂತ್ರ ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತಿದ್ದವು. ಈ ನಡುವೆಯೇ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಭೇಟಿ ಮಾಡುವುದೇ ದೊಡ್ಡ ರಾಜಕೀಯ ಸೂಚನೆ ಎಂಬಂತೆ ರಾಜಕೀಯ ವಲಯ ವಿಶ್ಲೇಶಿಸಿದೆ.
ಈ ಕುರಿತು ಪಕ್ಷದ ಮೂಲಗಳು ಹೇಳುವಂತೆ: ಸರ್ಕಾರವನ್ನು ಬಲಿಷ್ಠವಾಗಿ ಮುಂದುವರಿಸುವ ಬಗ್ಗೆ ಚರ್ಚೆ ಹಾಗೂ 2024–25 ರ ಪ್ರಮುಖ ಯೋಜನೆಗಳ ಅನುಷ್ಠಾನ ಮತ್ತು ಸಚಿವ ಸಂಪುಟ ಬದಲಾವಣೆ ಅಥವಾ ವಿಸ್ತರಣೆ ಹಾಗೂ ಜಿಲ್ಲಾ ಪ್ರವಾಸ, ಜನರಸಾಧನೆ ಕಾರ್ಯಕ್ರಮಗಳ ಹೊಂದಾಣಿಕೆ ಮುಖ್ಯ ಅಜೆಂಡಾಗಿರುವ ಸಾಧ್ಯತೆ ಇದೆ.
ಹೈಕಮಾಂಡ್ ಸೂಚನೆ: ನವೆಂಬರ್ 29ರಂದು ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಡಿಸಿಎಂ ಗೆ ಉಪಹಾರ ಸಭೆಯ ಆಹ್ವಾನ ನೀಡಿದ್ದರು. ಇದೀಗ ಅದೇ ಪರಂಪರೆಯನ್ನು ಮುಂದುವರಿಸಿದಂತೆ ಡಿಸಿಎಂ ಕೂಡ ಸಿಎಂ ಗೆ ಆಹ್ವಾನ ನೀಡಿರುವುದು, ಪಕ್ಷದೊಳಗಿನ ಒಗ್ಗಟ್ಟಿನ ಸಂದೇಶ ನೀಡುವಂತಾಗಿದೆ.
ಪಕ್ಷದ ಒಳಗಿನ ಅಸಮಾಧಾನ ನಿವಾರಣೆಗೆ ಸೂಚನೆ?: ಪಕ್ಷದ ಹೈಕಮಾಂಡ್ ಹಲವು ಬಾರಿ “ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಸಂಬಂಧ ಗಟ್ಟಿಯಾಗಿರಲಿ, ಸರ್ಕಾರ ಐದು ವರ್ಷ ಪೂರೈಸಲಿ” ಎಂದು ಸೂಚಿಸಿರುವ ಮಾಹಿತಿ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.
ಈ ಬೆಳವಣಿಗೆಗಳ ನಡುವೆ ಇಂದು ನಡೆದ ಉಪಹಾರ ಸಭೆ ಕೇವಲ ‘ರಾಜಕೀಯ ಚಹಾ-ಉಪಹಾರ’ ಅಲ್ಲ, ಭವಿಷ್ಯದ ಆಡಳಿತದ ದಿಕ್ಕು ಹಾಗೂ ಪಕ್ಷದ ಸ್ಥಿರತೆಗೆ ಮಹತ್ವದ ಸಭೆಯಾಗಿ ಪರಿಗಣಿಸಲಾಗಿದೆ.
