Home ನಮ್ಮ ಜಿಲ್ಲೆ ಬೆಂಗಳೂರು ಧರ್ಮಸ್ಥಳ ಪ್ರಕರಣ ಎನ್ಐಎಗೆ ವಹಿಸಿಲು ಬಿಜೆಪಿ ಆಗ್ರಹ

ಧರ್ಮಸ್ಥಳ ಪ್ರಕರಣ ಎನ್ಐಎಗೆ ವಹಿಸಿಲು ಬಿಜೆಪಿ ಆಗ್ರಹ

0

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಷ್ಟ್ರೀಯ ತನಿಖಾ ದಳಕ್ಕೆ (NIA ಗೆ) ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್‌ಐಎ ತನಿಖೆ ಮಾಡಿದರೆ ರಾಜ್ಯ ಸರಕಾರದ ಬಗ್ಗೆ ಜನರಿಗೆ ಮತ್ತು ಅಪಾರ ಭಕ್ತರಿಗೆ ವಿಶ್ವಾಸ ಬರಲಿದೆ. ಆದ್ದರಿಂದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಆಗ್ರಹ ಮುಂದಿಟ್ಟು ಸೆ.1ರಂದು ಸೋಮವಾರ ಧರ್ಮಸ್ಥಳ ಚಲೋಗೆ ಕರೆ ನೀಡುತ್ತಿರುವುದಾಗಿ ಪ್ರಕಟಿಸಿದರು.

ಹಿಂದೂ ಭಾವನೆಗೆ ಧಕ್ಕೆ ತಂದ ಸರಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಎನ್‌ಐಎ ತನಿಖೆಯ ಆಗ್ರಹದ ಬೇಡಿಕೆ ಮುಂದಿಟ್ಟು ರಾಜ್ಯದ ಸಮಸ್ತ ಹಿಂದೂ ಸಮಾಜವು ಇದರಲ್ಲಿ ಪಾಲ್ಗೊಳ್ಳಬೇಕು. ಸೆ.1ರಂದು ಬೃಹತ್‌ ಸಮಾವೇಶ ಮಾಡಲಿದ್ದೇವೆ ಎಂದು ತಿಳಿಸಿದರು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ, ಎಲ್ಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಧರ್ಮಸ್ಥಳಕ್ಕೆ ಬರಲಿದ್ದಾರೆ. ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದರು.

ಧರ್ಮಸ್ಥಳದ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಅದರಿಂದ ಹೊರ ಬರಬೇಕಾದರೆ ಸಮರ್ಪಕ ತನಿಖೆ ಅಗತ್ಯ. ಅಪ ಪ್ರಚಾರ ಮಾಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದ ವಿಷಯದಲ್ಲಿ ವಿಶೇಷ ತನಿಖಾ ತಂಡ ರಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತುರ ತೋರಿದ್ದು, ಖಂಡನೀಯ ಎಂದರು.

ಅನಾಮಿಕ ನೀಡಿದ ದೂರು ಆಧರಿಸಿ, ತನಿಖೆಗೆ ಆದೇಶಿಸುವ ಮುನ್ನ ಅದರ ಬಗ್ಗೆ ಗುಪ್ತಚರದಿಂದ ಸಮಗ್ರ ಮಾಹಿತಿ ಪಡೆದು, ಆನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಏಕಾಏಕಿ ತನಿಖೆಗೆ ಆದೇಶಿಸಿದ್ದು, ಒಳ್ಳೆಯ ಬೆಳವಣಿಗೆಯಲ್ಲ. ಪ್ರಕರಣವನ್ನು SITಗೆ ಒಪ್ಪಿಸಿರುವ ಹಿಂದಿರುವ ಶಕ್ತಿಗಳ ಕುರಿತು ತನಿಖೆ ಮಾಡಬೇಕು ಎಂದರು.

ಸೆ.1 ರಂದು ಬೆಳಗ್ಗೆ ತಮ್ಮ ತಮ್ಮ ನಗರ, ಗ್ರಾಮದಲ್ಲಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ವಾಹನದಲ್ಲಿ ಮೆರವಣಿಗೆ ಮುಗಿಸಿ ಧರ್ಮಸ್ಥಳಕ್ಕೆ ಆಗಮಿಸಬೇಕು. ಸೆಪ್ಟೆಂಬರ್ 2 ರಂದು ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾವೇಶ ನಡೆಯಲಿದೆ. ಎಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬರಬೇಕು ಎಂದು ಮನವಿ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version